ಕಾರವಾರ

ಕೆಲವು ಇಲಾಖೆಗಳ ಅಸೂಕ್ಷ್ಮ ವರ್ತನೆಯವಿರುದ್ಧ ಮಹಿಳಾ ಆಯೋಗದ ಅಸಮಾಧಾನ

ಕೆಲವು ಇಲಾಖೆಗಳ  ಅಸೂಕ್ಷ್ಮ ವರ್ತನೆಯವಿರುದ್ಧ ಮಹಿಳಾ ಆಯೋಗದ ಅಸಮಾಧಾನ

             ಕಾರವಾರ  24: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 170 ಪೋಕ್ಸೊ ಕೇಸ್ ಆಗಿದ್ದು, ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಪೋಕ್ಸೊ ಸಂತ್ರಸ್ತರಿಗೆ ಎಷ್ಟು  ಪರಿಹಾರ ನೀಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಸಮಾಧಾನ ವ್ಯಕ್ತಪಡಿಸಿದರು.

            ಕಾರವಾರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು  ,ಸಮಾಜ ಕಲ್ಯಾಣ ಇಲಾಖೆಯ  ಅಧಿಕಾರಿ ಅಸೂಕ್ಷ್ಮ ಮತ್ತು ಸಂವೇದನಾ ರಹಿತ ವರ್ತನೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ  ಆಯೋಗದ ಅಸಹಾಯಕತೆಯನ್ನು ನಾಗಲಕ್ಷ್ಮಿ ವ್ಯಕ್ತಪಡಿಸಿದರು. ಈ ಸಂಬಂಧ  ಒಂದು ವಾರದೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. 

              ಕಾರವಾರದ ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ  ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ 2023ರಲ್ಲಿ 46, 2024ರಲ್ಲಿ 60 ಹಾಗೂ 2025ರಲ್ಲಿ 60 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಒಟ್ಟು 166 ಪ್ರಕರಣಗಳು ವರದಿಯಾಗಿದ್ದರೂ, ಎಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ ಮತ್ತು ಎಷ್ಟು ಸಂತ್ರಸ್ತರಿಗೆ ವಿಕ್ಟಿಮ್ ಕಾಂಪೆನ್ಸೇಶನ್ ಫಂಡ್ ಮೂಲಕ ಪರಿಹಾರ ದೊರೆತಿದೆ ಎಂಬ ನಿಖರ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳು ಒಂದು ವಾರದೊಳಗೆ ವಿವರ ನೀಡುವುದಾಗಿ ತಿಳಿಸಿದ್ದಾರೆ.

            ಇತ್ತೀಚೆಗೆ 12.5 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಆಕೆಯ ಪೋಷಕರನ್ನು ಕರೆಸಿ ಮಾತನಾಡಿಸಲಾಗಿದೆ.  

ಸಂತ್ರಸ್ತ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ರೂ.2.5 ಲಕ್ಷ ಪರಿಹಾರ ಮಂಜೂರಾಗಿದೆ. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುತ್ತಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕವೂ ಮಧ್ಯಂತರ ಹಾಗೂ ಅಂತಿಮ ಪರಿಹಾರ ಪಡೆಯಲು ಅವಕಾಶವಿದೆ.

              ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ರೂ. 2 ಲಕ್ಷ ದಿಂದ ರೂ.10  ಲಕ್ಷದವರೆಗೂ ಪರಿಹಾರ ನೀಡಲು ಅವಕಾಶ ಇದೆ ಎಂದರು. 29 ಜನ ಮಹಿಳೆಯರ ಮೇಲೆ ಅತ್ಯಾಚಾರ: ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸುಮಾರು  29 ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿಯೂ ಆರೋಪಿಗಳ ಶಿಕ್ಷೆ ಮತ್ತು ಸಂತ್ರಸ್ತೆಯರಿಗೆ ನೀಡಿರುವ ಪರಿಹಾರದ ವಿವರಗಳನ್ನು ಕೇಳಲಾಗಿದೆ. ಈ ಮಾಹಿತಿಯನ್ನೂ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಸುದ್ದಿ ಓದಿ