ಬೆಳಗಾವಿ

ಸರಕಾರಿ ಕಚೇರಿ ಅವಧಿ ಢಾಬಾದಲ್ಲಿ ತಹಸೀಲ್ದಾರ್ ಮದ್ಯ ಸೇವನೆ : ಕ್ರಮಕ್ಕೆ ಒತ್ತಾಯ

ಸರಕಾರಿ ಕಚೇರಿ ಅವಧಿ ಢಾಬಾದಲ್ಲಿ ತಹಸೀಲ್ದಾರ್ ಮದ್ಯ ಸೇವನೆ : ಕ್ರಮಕ್ಕೆ ಒತ್ತಾಯ

ಬೆಳಗಾವಿ /ಖಾನಾಪುರ : ಸರ್ಕಾರಿ ಕೆಲಸದ ದಿನದಂದು ಕಚೇರಿ ಅವಧಿಯಲ್ಲಿ ಢಾಬಾದಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ ಎನ್ನಲಾದ ಖಾನಾಪುರ ತಹಸೀಲ್ದಾರ್ ದುಂಡಪ್ಪ ಕೋಮಾರ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೇವಾಚಿಹಟ್ಟಿ ಗ್ರಾಮದ ನಿವಾಸಿ ವಿಲಾಸ ಕವಟಣಕರ ಆಗ್ರಹಿಸಿದ್ದಾರೆ.

   ರವಿವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಿಶ್ರಾಂತಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾನಾಪುರ ತಾಲ್ಲೂಕಿನ ಜಾಂಬೋಟಿ ಸಮೀಪ ಬೆಳಗಾವಿ – ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿರುವ ಸಂಗೀತಾ ಢಾಬಾದಲ್ಲಿ ಅಧಿಕಾರಿಗಳು ಮದ್ಯ ಸೇವಿಸುತ್ತಿದ್ದುದನ್ನು ತಾವು ಗಮನಿಸಿದ್ದಾಗಿ ಆರೋಪಿಸಿದರು.

    ಕೆಲವು ದಿನಗಳ ಹಿಂದೆ ಮಿತ್ರ ಸಾಗರ ಕೋಳೆಕರ ಅವರೊಂದಿಗೆ ಕಣಕುಂಬಿಗೆ ತೆರಳಿ ಮರಳುವಾಗ ಮಧ್ಯಾಹ್ನದ ಊಟಕ್ಕಾಗಿ ಸಂಗೀತಾ ಢಾಬಾಕ್ಕೆ ಹೋಗಿದ್ದ ಸಂದರ್ಭದಲ್ಲಿ ತಹಸೀಲ್ದಾರ್ ದುಂಡಪ್ಪ ಕೋಮಾರ, ಗ್ರೇಡ್-2 ತಹಸೀಲ್ದಾರ್ ಎಸ್.ಕೆ. ತಂಗೊಳ್ಳಿ ಹಾಗೂ ಕಂದಾಯ ನಿರೀಕ್ಷಕ ರಮೇಶ ಕೋಲಕಾರ ಮದ್ಯ ಸೇವಿಸುತ್ತಿರುವುದನ್ನು ಕಂಡಿದ್ದಾಗಿ ವಿಲಾಸ ಕವಟಣಕರ ತಿಳಿಸಿದರು.

   ಸರ್ಕಾರಿ ಕರ್ತವ್ಯ ನಿರ್ವಹಿಸಬೇಕಾದ ಕಚೇರಿ ವೇಳೆಯಲ್ಲಿ ಜವಾಬ್ದಾರಿಯುತ ಅಧಿಕಾರಿಗಳು ಸರ್ಕಾರಿ ವಾಹನವನ್ನು ಢಾಬಾದ ಮುಂದೆ ನಿಲ್ಲಿಸಿ, ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಮದ್ಯ ಸೇವನೆಯಲ್ಲಿ ತೊಡಗಿರುವುದು ಗಂಭೀರ ಕರ್ತವ್ಯಲೋಪವಾಗಿದೆ ಎಂದು ಅವರು ಆಕ್ಷೇಪಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಬಳಿ ಲಭ್ಯವಿರುವ ದಾಖಲೆಗಳನ್ನು ಸಂಗ್ರಹಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಹೇಳಿದರು.

   ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮೊಬೈಲ್‌ನಲ್ಲಿ ಸಂಗ್ರಹಿಸಿದ್ದ ಕೆಲವು ದೃಶ್ಯಾವಳಿಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಪ್ರದರ್ಶಿಸಿದ ವಿಲಾಸ ಅವರು, ತಹಸೀಲ್ದಾರ್ ಕೋಮಾರ ಮತ್ತು ಗ್ರೇಡ್-2 ತಹಸೀಲ್ದಾರ್ ತಂಗೊಳ್ಳಿ ಮದ್ಯದ ಗ್ಲಾಸ್‌ಗಳ ಮುಂದೆ ಕುಳಿತಿರುವ ದೃಶ್ಯಗಳು, ಮದ್ಯದ ಅಮಲಿನಲ್ಲಿರುವಂತೆ ಕಾಣಿಸುವ ದೃಶ್ಯಗಳು ಹಾಗೂ ತಹಸೀಲ್ದಾರ್ ಕೋಮಾರ ಕಚೇರಿಯಲ್ಲಿ ನಿದ್ರಿಸುತ್ತಿರುವ ದೃಶ್ಯಗಳಿವೆ ಎಂದು ತಿಳಿಸಿದರು.

   ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಸಂಗೀತಾ ಢಾಬಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅಧಿಕಾರಿಗಳಿಗೆ ಮದ್ಯ ಸರಬರಾಜು ಮಾಡಿ ಸೇವನೆಗೆ ಅವಕಾಶ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಢಾಬಾದ ವಿರುದ್ಧವೂ ನಿಯಮಾನುಸಾರ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

  ಪತ್ರಿಕಾಗೋಷ್ಠಿಯಲ್ಲಿ ಸಾಗರ ಕೋಳೆಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ