ಶಿಗ್ಗಾವ್

ರೈತರ ಪಾದಯಾತ್ರೆಗೆ ಶಿಗ್ಗಾವಿ ಖಾಸಗಿ ಶಾಲೆಗಳ ಒಕ್ಕೂಟದ ಬೆಂಬಲ

ರೈತರ ಪಾದಯಾತ್ರೆಗೆ ಶಿಗ್ಗಾವಿ ಖಾಸಗಿ ಶಾಲೆಗಳ ಒಕ್ಕೂಟದ ಬೆಂಬಲ

ಲೋಕದರ್ಶನ ವರದಿ 

ಶಿಗ್ಗಾವಿ 18 : ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರೈತರ ಪಾದಯಾತ್ರೆಯು ತಾಲೂಕಿನ ಮಡ್ಲಿ ಕ್ರಾಸ್ ಬಳಿ ಬಂದಾಗ, ಶಿಗ್ಗಾವಿ ತಾಲೂಕಿನ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ಭಾಗವಹಿಸಿ ಸಂಪೂರ್ಣ ಬೆಂಬಲ ಸೂಚಿಸಿತು.ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಬಸರೆಡ್ಡಿ ಬಿ.ಎನ್‌. ಮಾತನಾಡಿ, ನಾವು ಗ್ರಾಮೀಣ ಭಾಗಗಳಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ.

ರೈತರಿಂದಲೇ ನಮ್ಮ ಶಾಲೆಗಳು ಸುಗಮವಾಗಿ ನಡೆಯುತ್ತಿವೆ ಹಾಗೂ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ರೈತರ ಕೊಡುಗೆ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ರೈತರು ಸ್ವಾಭಿಮಾನದಿಂದ ಬದುಕಲು ಅವರ ಬೆಳೆಗೆ ಸೂಕ್ತ ಬೆಲೆ ಸಿಗುವುದು ಅವರ ಹಕ್ಕಾಗಿದೆ.

ರೈತರ ನ್ಯಾಯಯುತ ಹೋರಾಟಕ್ಕೆ ಒಕ್ಕೂಟದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೀರನಗೌಡ ದೊಡ್ಡಗೌಡರ, ಕಾರ್ಯದರ್ಶಿ ಡಾ. ಶಿವ ಹಾವೇರಿ, ಜಂಟಿ ಕಾರ್ಯದರ್ಶಿ ವಿಶ್ವೇಶ್ವರಯ್ಯ ಎಸ್‌. ಹಿರೇಮಠ, ಖಜಾಂಚಿ ರಾಘವೇಂದ್ರ ಎಸ್‌. ಬೇವಿನಮರದ, ಮಾಧ್ಯಮ ಸಲಹೆಗಾರ ದೇವರಾಜ್ ಸುಣಗಾರ ಹಾಗೂ ಒಕ್ಕೂಟದ ಇತರ ಸದಸ್ಯರು ಉಪಸ್ಥಿತರಿದ್ದರು.   


ಸುದ್ದಿ ಓದಿ