ಸೋಲು-ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಮುಖ್ಯ
ಗದಗ 18: ಕ್ರೀಡಾಪಟುಗಳಿಗೆ ಸೋಲು-ಗೆಲುವುಗಳಿಗಿಂತ ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಮುಖ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ ತಿಳಿಸಿದರು.ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಅಕ್ಟೋಬರ್ (18) ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಇವರ ಸಹಯೋಗದಲ್ಲಿ ಜರುಗಿದ 2026-27 ನೇ ಸಾಲಿನ 14/17 ವಯೋಮಾನದ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿದ್ದು, ಶಿಸ್ತು, ಆತ್ಮ, ವಿಶ್ವಾಸ, ಸಹನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ತಿಳಿಸಿದರು. ಕುಸ್ತಿ ನಮ್ಮ ದೇಶದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಗ್ರಾಮೀಣ ಭಾಗದ ಕ್ರೀಡಾಪಟುಗಳ ಪ್ರತಿಭೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಇಂತಹ ಪಂದ್ಯಾವಳಿಗಳು ಉತ್ತಮ ವೇದಿಕೆಯಾಗಿವೆ ಎಂದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಬಾಲಕ-ಬಾಲಕಿಯರು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು.
ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ಪರಸ್ಪರ ಗೌರವದೊಂದಿಗೆ ಸ್ಪರ್ಧಿಸಬೇಕು. ಕ್ರೀಡಾಪಟುಗಳು ತಮ್ಮ ಸಾಧನೆಯ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿಯನ್ನು ಬೆಳೆಸುವ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಕುಸ್ತಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುವ ಮೂಲಕ ಭವಿಷ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸಿದರು. ಕ್ರೀಡಾಪಟುಗಳು ಮುಂದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವ ಮಟ್ಟಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಬಂದಿರುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾ ನಿಯಮಗಳಿಗೆ ಬದ್ಧರಾಗಿ, ಸೌಹಾರ್ದಯುತವಾಗಿ ಪಂದ್ಯಗಳಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್. ಎಸ್. ಬುರಡಿ ಆಶಿಸಿದರು.
ವೆಂಕಟೇಶ್ ಆಲ್ಕೋಡ ಹಾಗೂ ತಂಡದವರಿಂದ ರಾಷ್ಟ್ರೀಯ ಗೀತೆ ಮತ್ತು ನಾಡಗೀತೆ ಪ್ರಸ್ತುತ ಪಡಿಸಿದರು. ಎಪಿಸಿಓ ಶಿವಕುಮಾರ ಕುರಿಯವರ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಎಮ್.ಎಸ್. ಕುಚಬಾಳ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷ ಡಾ. ವಿನೋದ ಕುಮಾರ, ಗದಗ ಕುಸ್ತಿ ಸಂಘದ ಅಧ್ಯಕ್ಷ ವಸಂತ ಸಿದ್ದಮ್ಮನಹಳ್ಳಿ, ಐ.ಎಮ್.ಎ. ಮಾಜಿ ಅಧ್ಯಕ್ಷರು, ಹಾಗೂ ರೆಡ್ ಕ್ರಾಸ್ ನ ಉಪಾಧ್ಯಕ್ಷ ಮತ್ತು ವೈದ್ಯ
ಡಾ. ಪಿ.ಕೆ. ನೂರಾನಿ ಡಿವೈಪಿಸಿ ಎಮ್.ಎಚ್. ಕಂಬಳಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಸ್. ಡಿ.ಕನವಳ್ಳಿ, ಡಿವೈಪಿಸಿ. ರವಿ ಪ್ರಕಾಶ, ಡಿಪಿಓ ಗಾಯಿತ್ರಿ ದೇವಿ ಎಮ್, ಬಿಇಓ ವಿ.ವಿ ನಡುವಿನ ಮನಿ, ಡಿ.ಎಸ್. ತಳವಾರ, ಇಓ ಎಮ್.ಪಿ ಗೊಟೂರು, ಎಚ್.ಬಿ. ರಡ್ಡೆರ, ದೇವೇಂದ್ರ್ಪ ಗಡೆದ ಎಮ್.ಎಚ್. ಸವದತ್ತಿ, ಸೇರಿದಂತೆ ಇಲಾಖೆಯ ಅಧಿಕಾರಿಗಳು ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು, ದೈಹಿಕ ಶಿಕ್ಷಣ ನಿರ್ದೇಶಕರು, ತರಬೇತುದಾರರು, ಸಂಘಟಕರು ಉಪಸ್ಥಿತರಿದ್ದರು.