10ನೇ ವಯಸ್ಸಿನಲ್ಲೇ ಪುಸ್ತಕ ಬರೆದು ಬಂದ ರಾಯಧನವನ್ನು ಪರಿಸರ ಸಂರಕ್ಷಣೆಗೆ ದೇಣಿಗೆ ನೀಡಿದ ವಿಜಯಪುರದ ಬಾಲಕಿ ಶಿವಾನಿ ಬಿರಾದಾರ
ವಿಜಯಪುರ 18: 10 ವರ್ಷದ ವಿದ್ಯಾರ್ಥಿನಿಯೊಬ್ಬಳು ತಾನು ರಚಿಸಿದ ಪುಸ್ತಕದಿಂದ ಬಂದಿರುವ ರೂ. 10 ಸಾವಿರ ರಾಯಲ್ಟಿ ಹಣವನ್ನು ವೃಕ್ಷಥಾನ್ ಹೆರಿಟೇಜ್ ರನ್ ಗೆ ದೇಣಿಗೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದು, ಪರಿಸರ ಪ್ರೀತಿ ತೋರಿದ್ದಾಳೆ.ವಿಜಯಪುರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಐಸಿಎಸ್ಇ ಶಾಲೆಯ 10 ವರ್ಷದ ಬಾಲಪ್ರತಿಭೆ ಶಿವಾನಿ ಬಿರಾದಾರ ಇಂದು ರವಿವಾರ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿಯಾಗಿ ದೇಣಿಗೆಯ ಚೆಕ್ ನೀಡಿದಳು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತನ್ನ ಸೃಜನಶೀಲ ಬರವಣಿಗೆಯಿಂದ ಮ್ಯಾಜಿಕ್ ಟೇಲ್ಸ್ ಫಾರ್ ಲಿಟಲ್ ಹಾರ್ಟ್ಸ್ ಎಂಬ ಪುಸ್ತಕವನ್ನು ರಚಿಸಿ ಅದರಿಂದ ಬಂದ ?10,000 ರಾಯಲ್ಟಿ(ಪುಸ್ತಕ ಮಾರಾಟದಿಂದ ಬರುವ ಹಣವನ್ನು ಲೇಖಕರಿಗೆ ನೀಡುವ ಸಂಭಾವನೆ) ಹಣವನ್ನು ಪರಿಸರ ಜಾಗೃತಿಯ ಸಂಕೇತವಾಗಿರುವ ವೃಕ್ಷಥಾನ್ ಹೆರಿಟೇಜ್ ರನ್’ಗೆ ದೇಣಿಗೆಯಾಗಿ ನೀಡಿರುವುದು ಮನದುಂಬಿ ಬಂದಿದೆ.
ಕಳೆದ ಎರಡು ವರ್ಷಗಳಿಂದ ವೃಕ್ಷಥಾನ್ ನಲ್ಲಿ ಭಾಗವಹಿಸುತ್ತಿರುವ ಶಿವಾನಿ, ಈ ಕಾರ್ಯಕ್ರಮದ ಆಶಯಗಳಿಂದ ಪ್ರೇರಿತರಾಗಿ ತನ್ನ ಪರಿಶ್ರಮದ ಗಳಿಕೆಯನ್ನು ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಸಮರ್ಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.ಚಿಕ್ಕ ವಯಸ್ಸಿನಲ್ಲೇ ಈ ಬಾಲಕಿಯಲ್ಲಿ ಅರಳಿರುವ ಸೃಜನಶೀಲತೆ, ಅದಮ್ಯ ಪರಿಶ್ರಮ ಮತ್ತು ಉದಾತ್ತ ಸಾಮಾಜಿಕ ಕಳಕಳಿ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ.
ಈ ಬಾಲಕಿಯ ಪ್ರತಿಭೆ, ಪರಿಶ್ರಮ ಮತ್ತು ಉದಾತ್ತ ಮನೋಭಾವಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಶಿವಾನಿಯ ಮುಂದಿನ ಸಾಧನೆಯ ಹಾದಿ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ. ಇಂತಹ ಬಾಲಪ್ರತಿಭೆಗಳು ನಮ್ಮ ನಾಡಿನ ಹೆಮ್ಮೆ ಹಾಗೂ ಭವಿಷ್ಯದ ಭರವಸೆ ಮೂಡಿಸಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ಖಜಾಂಚಿ ಸಂತೋಷ ಓರಸಂಗ, ಅಗಸ್ತ್ಯ ಫೌಂಡೇಶನ್ ಪ್ರಾದೇಶಿಕ ಮುಖ್ಯಸ್ಥೆ ಗೀತಾ ಮಯೂರ ಪಾಟೀಲ ಉಪಸ್ಥಿತರಿದ್ದರು.