ಕಂಪ್ಲಿ

ಎಲ್‌ಎಲ್‌ಸಿ ಕಾಲುವೆಗೆ ಡಿ.15ರವರೆಗೆ ನೀರು ಕೊಡಿ, ಇಲ್ಲವಾದ್ರೆ ಉಗ್ರ ಹೋರಾಟ : ವಿ.ವಿರೇಶ ಎಚ್ಚರಿಕೆ

ಎಲ್‌ಎಲ್‌ಸಿ ಕಾಲುವೆಗೆ ಡಿ.15ರವರೆಗೆ ನೀರು ಕೊಡಿ, ಇಲ್ಲವಾದ್ರೆ ಉಗ್ರ ಹೋರಾಟ : ವಿ.ವಿರೇಶ ಎಚ್ಚರಿಕೆ

ಲೋಕದರ್ಶನ ವರದಿ 


ಕಂಪ್ಲಿ 18:  ತುಂಗಭದ್ರ ಬಲದಂಡೆಯ ಎಲ್‌ಎಲ್‌ಸಿ ಕಾಲುವೆ ಕೆಳ ಭಾಗದ ರೈತರ ಮುಂಗಾರು ಬೆಳೆ ರೈತರ ಕೈಸೇರುವವರೆಗೂ ನೀರು ಹರಿಸಲು ಅ.19ರಂದು ಬೆಂಗಳೂರಿನಲ್ಲಿ ನಡೆಯುವ ತುಂಗಭದ್ರ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಭಾಗದ ರೈತರೊಂದಿಗೆ ಬೀದಿಗೆ ಇಳಿದು, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಬೃಹತ್ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಅಧ್ಯಕ್ಷ ವಿ.ವಿರೇಶ ಎಚ್ಚರಿಕೆ ನೀಡಿದರು.  

ತಾಲೂಕಿನ ಎಮ್ಮಿಗನೂರು ಗ್ರಾಮದ ಆಂಜನೇಯ್ಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತರ ತುರ್ತು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಆಗಸ್ಟ್‌ 11ಕ್ಕೆ ಎಲ್‌ಎಲ್‌ಸಿ ಭಾಗದ ರೈತರಿಗೆ ನೀರು ಬಿಟ್ಟರೂ, ಕೆಳ ಭಾಗದ ರೈತರ ಜಮೀನುಗಳಿಗೆ ನೀರಿನ ಸಂಕಷ್ಟ ಎದುರಿಸಬೇಕಾಯಿತು. ಇಲ್ಲಿನ ಎಮ್ಮಿಗನೂರು ಸೇರಿದಂತೆ ಕೆಳ ಹಂತದ ನಾಲೆಗಳಿಗೆ 12 ದಿನ ನೀರು ಹರಿಸುವಲ್ಲಿ ತಡವಾಗಿದೆ.

ಇದರಿಂದ ಇಲ್ಲಿನ ರೈತರ ಜಮೀನುಗಳಲ್ಲಿ ಬೆಳೆ ಬೆಳೆಯುವದಕ್ಕೆ ಆಗದೇ, ಕಠಿಣ ಪರಿಸ್ಥಿತಿ ತಂದೊಡ್ಡಿದ್ದಾರೆ. ಇನ್ನೂ 78 ದಿನ ನೀರು ಉಳಿದಿದ್ದು, ಎಲ್ಲಾ ರೈತರು ಒಂದೇ ಸಲ ಬಿತ್ತಿಕೊಳ್ಳುವದಕ್ಕೆ ಆಗುತ್ತಾ. ಇದರಿಂದ ಕೆಲ ರೈತರಿಗೆ ಬೆಳೆ ಬೆಳೆಯುವುದಕ್ಕೆ ಆಗುವದಿಲ್ಲ.  ಸಮರ​‍್ಕವಾಗಿ ನೀರು ಹರಿಸಿದರೆ ಮಾತ್ರ ಬೆಳೆದ ಬೆಳೆಗಳು ರೈತರ ಕೈಸೇರಲು ಸಾಧ್ಯ. ಇಲ್ಲವಾದಲ್ಲಿ ರೈತರು ನಷ್ಟದ ಕೂಪಕ್ಕೆ ಸೇರಬೇಕಾಗುತ್ತದೆ. ಇಂಡೆಂಟ್ ಸೇರಿ ಒಟ್ಟು 2100 ಕ್ಯೂಸೆಕ್ ನೀರು ಹೆಚ್ಚುವರಿಯಾಗಿ ಬಿಡುತ್ತಿದ್ದು, ನಮಗೆ ನೀಡುವ 1500-1600 ಕ್ಯೂಸೆಕ್ ನೀರು ಬಿಟ್ಟು, ಇನ್ನೂ 650 ಕ್ಯೂಸೆಕ್ ನೀರನ್ನು ಕಡಿತಗೊಳಿಸಿದರೆ,

ನೀರು ಉಳಿತಾಯವಾಗಿ ನಂತರ ರೈತರಿಗೆ ಬಿಟ್ಟರೆ ಅನುಕೂಲವಾಗುತ್ತದೆ. ಕರ್ನಾಟಕ ಮತ್ತು ಆಂಧ್ರ ಕೋಟಾದಡಿಯಲ್ಲಿ 600 ಕ್ಯೂಸೆಕ್ ಸೇರಿಸಿ ನೀರು ಬಿಡಬೇಕು. ಇಲ್ಲವಾದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಡಿ.15ರವರೆಗೆ ರೈತರಿಗೆ ನೀರು ಹರಿಸಬೇಕು. ಕುಡಿಯುವ ನೀರಿನ ನೆಪದಲ್ಲಿ ಬೃಹತ್ ಕಾರ್ಖಾನೆಗಳಿಗೆ ನೀರು ಹರಿಸುವ ಪಿತೂರಿಯಾಗಿದೆ. ಈ ವರ್ಷ ಕುಡಿಯುವ ನೀರಿಗೆ ಬರವಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ಶಾಮಿಲಾಗಿ ಜಲಾಶಯದಲ್ಲಿ ನೀರು ಸಂಗ್ರಹಿಸಿಕೊಂಡು, ಕಾರ್ಖಾನೆಗಳಿಗೆ ಮಾರಿಕೊಳ್ಳುತ್ತಿದ್ದಾರೆ.

ಇದನ್ನು ಬಿಟ್ಟು, ಸಂಕಷ್ಟದಲ್ಲಿರುವ ಕೆಳ ಭಾಗದ ನಾಲೆಗಳ ರೈತರಿಗೆ ನೀರು ಹರಿಸಿ, ರೈತರನ್ನು ಉಳಿಸಬೇಕೆಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ ರೈತ ಮುಖಂಡರಾದ ಸೂಗಪ್ಪ, ಸದಾಶಿವಪ್ಪ,  ಅಶ್ವತ್‌ರೆಡ್ಡಿ, ಜಿ.ಧರ್ಮಣ್ಣನವರ ಮುದಿಯಪ್ಪ. ಹಾದಿಮನಿ ಸಣ್ಣ ಜಡೆಪ್ಪ, ವೆಂಕಟೇಶ, ಕಾಸಿಂಸಾಬ್, ಬಿ.ರಾಜಾ ಸೇರಿದಂತೆ ರೈತರಿದ್ದರು.    


ಸುದ್ದಿ ಓದಿ