ಜಾಮೀಯಾ ಮಸೀದಿಯಲ್ಲಿ ‘ಮುಯೇ ಮುಬಾರಕ್’ ಪವಿತ್ರ ದರ್ಶನ ಭಾಗ್ಯ
ಲೋಕದರ್ಶನ ವರದಿ
ಕಂಪ್ಲಿ 11: ತಾಲೂಕಿನಾದ್ಯಂತ ಗ್ಯಾರಿ್ವ ಶರೀಫ್ ಹಬ್ಬದ ಸಡಗರ ಮನೆಮಾಡಿದ್ದು, ಪಟ್ಟಣದ 5ನೇ ವಾರ್ಡಿನ ಇಂದಿರಾನಗರದ ಇತಿಹಾಸ ಪ್ರಸಿದ್ಧ ಜಾಮೀಯಾ (ಮಹ್ಮದೀಯ) ಮಸೀದಿಯಲ್ಲಿ ಶನಿವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಹಬ್ಬದ ಅಂಗವಾಗಿ ಮಸೀದಿಯಲ್ಲಿ ಹಜರತ್ ಮಹ್ಮದ್ ಸಲ್ಲಲ್ಲಾವು ವಾ ಸಲ್ಲಂ ಹಾಗೂ ಹುಜೂರ್ ಪಿರಾನೆ ಪೀರ್ ಗೌಸೇ ಅಜಂ ದಸ್ತಗೀರ್ ರವರ ‘ಮುಯೇ ಮುಬಾರಕ್’ (ಪವಿತ್ರ ಕೇಶ) ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಧಾರ್ಮಿಕ ಇತಿಹಾಸ ಹೊಂದಿರುವ ಮುಯೇ ಮುಬಾರಕ್‌ನ ಪವಿತ್ರ ದರ್ಶನವನ್ನು ಪಡೆಯಲು ಶನಿವಾರ ಸಂಜೆಯಿಂದಲೆ ಮಸೀದಿಗೆ ಮುಸ್ಲಿಂ ಬಾಂಧವರು ಭಕ್ತಾದಿಗಳು ತಂಡೋಪತಂಡವಾಗಿ ಆಗಮಿಸಿದರು. ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.
ಈ ವಿಶಿಷ್ಟ ಧಾರ್ಮಿಕ ಮಹೋತ್ಸವವು ಮುಸ್ಲಿಂ ಸಮುದಾಯದ ಪ್ರಮುಖ ಧರ್ಮಗುರುಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಕಂಪ್ಲಿಯ ಸಜ್ಜಾದೆ ನಶೀನ್ ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಉರಅಜಮ್ ಸಾಹೇಬ್ ದಿವಾನ ಖಾನಾ, ಸೈಯದ್ ಷಾ ಅಬ್ದುಲ್ ಖಾದರ್ ಖಾದ್ರಿ ಉರೂಫ್ ಮುಕ್ತಾರ್ ಸಾಹೇಬ್ ಉಂ ಸಜ್ಜಾದೆ ನಶೀನ್ ದಿವಾನ ಖಾನಾ,
ಸೈಯದ್ ಷಾ ಗೇಸುದರಾಸ್ ಖಾದ್ರಿ ಬಿರದರೆ ಸಜ್ಜಾದೆ ನಶೀನ್ ದಿವಾನ ಖಾನಾ ಹಾಗೂ ಸೈಯದ್ ಉಮೇಶ್ ಸಾಹೇಬ್ ಖಾದ್ರಿ ದಿವಾನ ಖಾನೆ, ಕಂಪ್ಲಿ ಮತ್ತು ತೆಕ್ಕಲಕೋಟೆಯ ಧರ್ಮಗುರುಗಳಾದ ಸೈಯದ್ ಮೊಹಿದ್ದೀನ್ ಖಾದ್ರಿ ಅವರು ಪಾಲ್ಗೊಂಡು ಭಕ್ತಾದಿಗಳಿಗೆ ಆಶೀರ್ವಚನ ನೀಡಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲೆಂದು ದುವಾ (ಪ್ರಾರ್ಥನೆ) ಮಾಡಿದರು.