ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಬೆಳಗಾವಿ : ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ದೆಹಲಿಯಲ್ಲಿ ಭಾನುವಾರ ರಾತ್ರಿ ಅಪಘಾತಕ್ಕೀಡಾಗಿದೆ. ದೆಹಲಿಯ ಐ.ಪಿ. ಎಸ್ಟೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಬ್ಲ್ಯೂಡಿ ಕಚೇರಿ ಬಳಿ ರಾತ್ರಿ ಸುಮಾರು 9:30ಕ್ಕೆ ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ವೇಳೆ ಇನ್ನೋವಾ ಕಾರಿನಲ್ಲಿ ಕಿರಾರಿ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಝಾ ಹಾಗೂ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಇದ್ದರು.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, 32 ವರ್ಷದ ಅಶುತೋಷ್ ಪಾಂಡೆ ಅವರು ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಲಕ್ಷ್ಮಿ ನಗರದಿಂದ ಐಟಿಒ ಕಡೆಗೆ ತೆರಳುತ್ತಿದ್ದರು. ಪಿಡಬ್ಲ್ಯೂಡಿ ಕಚೇರಿ ಬಳಿ ಸ್ವಿಫ್ಟ್ ಕಾರು ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಬಳಿಕ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯನ್ನೂ ಸ್ಥಳಕ್ಕೆ ಕರೆಸಲಾಗಿದ್ದು, ಎರಡೂ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಲಾಗಿದೆ. ಘಟನೆ ಕುರಿತು ಐ.ಪಿ. ಎಸ್ಟೇಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.