ಕಾಮಗಾರಿಗಳ ಸಂಪೂರ್ಣ ದಾಖಲೆ ನೀಡುವಂತೆ ಡಿಸಿಗೆ ಆಂಜನೇಯ ಮನವಿ

ಕಾಮಗಾರಿಗಳ ಸಂಪೂರ್ಣ ದಾಖಲೆ ನೀಡುವಂತೆ ಡಿಸಿಗೆ ಆಂಜನೇಯ ಮನವಿ


ಚಿತ್ರದುರ್ಗ 21: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿದ್ದು, 2018ರಿಂದ ಕೈಗೊಂಡಿರುವ ಕಾಮಗಾರಿಗಳ ಸಂಪೂರ್ಣ ವಿವರ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಎಚ್‌. ಆಂಜನೇಯ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ, ಸಣ್ಣ ನೀರಾವರಿ, ಡಿಎಂಎಫ್, ಕೆಎಂಇಆರ್ಸಿ, ವಿಶ್ವೇಶ್ವರಯ್ಯ ಜಲನಿಗಮ, ಲ್ಯಾಂಡ್ ಆರ್ಮಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಹಾಗೂ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆ ಮತ್ತು ನಿಗಮಗಳಿಂದ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ದುರ್ಬಳಕೆಯಾಗಿದೆ

ಎಂಬ ಆರೋಪಗಳು ಕೇಳಿಬಂದಿವೆ ಎಂದರು. ಕಾಮಗಾರಿ ಸ್ಥಳಗಳಲ್ಲಿ ಅಂದಾಜು ವೆಚ್ಚ, ಗುತ್ತಿಗೆದಾರರ ಹೆಸರು ಹಾಗೂ ಅನುದಾನದ ವಿವರ ಒಳಗೊಂಡ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದ್ದರೂ ಹಲವು ಕಾಮಗಾರಿಗಳಲ್ಲಿ ಇದನ್ನು ಪಾಲಿಸಿಲ್ಲ ಎಂದು ಆರೋಪಿಸಿದರು. ಕೆರೆಗಳ ಹೂಳೆತ್ತುವಿಕೆ, ಹಳ್ಳಗಳ ದುರಸ್ತಿ ಹಾಗೂ ಚೆಕ್ಡ್ಯಾಂ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ. ಡಿಎಂಎಫ್, ಎಸ್ಸಿಎಸ್ಪಿ ಹಾಗೂ ಟಿಎಸ್ಪಿ ಅನುದಾನ ಬಳಕೆಯಲ್ಲಿಯೂ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ದೂರಿದರು.  

ಕ್ಷೇತ್ರದಲ್ಲಿ ಯಾವ ಇಲಾಖೆಯಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ, ಯಾವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಅವುಗಳ ಅಂದಾಜು ವೆಚ್ಚ ಹಾಗೂ ಗುತ್ತಿಗೆದಾರರ ವಿವರ ಸೇರಿದಂತೆ ಸಂಪೂರ್ಣ ದಾಖಲೆಗಳನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ದಾಖಲೆಗಳು ದೊರೆತ ಬಳಿಕ ಅವುಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಂಜನೇಯ ಹೇಳಿದರು.

ಅಗತ್ಯ ದಾಖಲೆಗಳನ್ನು ಪರೀಶೀಲಿಸಿದ ನಂತರ ಅವ್ಯವಹಾರದ ಕುರಿತು ಕಿರುಹೊತ್ತಿಗೆ ಪ್ರಕಟಿಸುವುದು, ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸುವುದು ಹಾಗೂ ಲೋಕಾಯುಕ್ತ ಮತ್ತು ಸಿಒಡಿ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದರು. ಹಿಂದಿನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರ ಅವಧಿಯಲ್ಲಿ ಕೆಲವು ಕಡತಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡಲಾಗಿದೆ ಎಂಬ ಆರೋಪಗಳ ಕುರಿತು ಕೂಡ ಮಾಹಿತಿ ಕೇಳಲಾಗುವುದು ಎಂದು ಹೇಳಿದರು. ಭದ್ರಾ ಯೋಜನೆ ಕುರಿತು ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೆ ಭದ್ರಾ ಯೋಜನೆ ಆರಂಭಿಸುವಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರವಿದೆ.

ಯೋಜನೆಯ ನೀರು ಜಿಲ್ಲೆಗೆ ಹರಿಯುತ್ತಿರುವುದಕ್ಕೆ ಹಿಂದಿನ ಸರ್ಕಾರಗಳ ಕೊಡುಗೆಯೂ ಇದೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಎಚ್‌.ಎನ್‌. ತಿಪ್ಪೇಸ್ವಾಮಿ ಮಾತನಾಡಿ, ಡಿಎಂಎಫ್ ಅನುದಾನದಲ್ಲಿ ಶಾಲೆಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಅದರ ಮೇಲೆ ಶಾಸಕರ ಅನುದಾನ ಎಂದು ನಮೂದಿಸಲಾಗಿದೆ ಎಂಬ ಆರೋಪವಿದೆ. ಕೆರೆ ಹೂಳೆತ್ತುವಿಕೆ ಹಾಗೂ ಚೆಕ್ಡ್ಯಾಂ ನಿರ್ಮಾಣದಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳಿದ್ದು, ಅಧಿಕೃತ ದಾಖಲೆಗಳನ್ನು ಪಡೆದು ಬಳಿಕ ತನಿಖೆಗೆ ಆಗ್ರಹಿಸಲಾಗುವುದು ಎಂದರು.

ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಎಮ್ಮೆಹಟ್ಟಿ ಕೃಷ್ಣಮೂರ್ತಿ, ಡಿ.ಕೆ. ಶಿವಮೂರ್ತಿ, ಲೋಹಿತ್ಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ಮಜರ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಚೇತನ್ ಎಚ್‌. ಬೋರೇನಹಳ್ಳಿ ಹಾಗೂ ಮುಖಂಡರಾದ ಗೋಡೆಮನೆ ಹನುಮಂತಪ್ಪ, ಬಿ.ಕೆ. ವಿಜಯಕುಮಾರ್, ಹನುಮಂತಪ್ಪ, ಸುರೇಶ್, ಅನಿಲ್ ಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ