ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ

ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ House burglary case: Yamakanamaradi police arrest three, recover gold jewelry.

ಬೆಳಗಾವಿ: ಜಿಲ್ಲೆಯ ಕಾಟಾಬಳಿ ಗ್ರಾಮದಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಯಮಕನಮರಡಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಕಳುವಾಗಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಕಾಟಾಬಳಿ ಗ್ರಾಮದ ಛಾಯಾ ಯಲ್ಲಪ್ಪಾ ದೇಶೂರ ಅವರು ಫೆಬ್ರವರಿ 27ರಂದು ಸಂತೆಗಾಗಿ ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಮನೆಯ ಮೇಲ್ಭಾಗದ ಹಂಚುಗಳನ್ನು ತೆಗೆದು ಒಳನುಗ್ಗಿದ ಕಳ್ಳರು, ಟ್ರೇಜರಿ ಅದರಲ್ಲಿದ್ದ ಬಂಗಾರದ ಚೈನ್, ಬ್ರಾಸ್ಲೆಟ್, ಕಿವಿಯೋಲೆಗಳು ಹಾಗೂ ಬೆಳ್ಳಿಯ ಬ್ರಾಸ್ಲೆಟ್ ಸೇರಿದಂತೆ ಒಟ್ಟು 78,000 ಮೌಲ್ಯದ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

   ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 81/2026ರಡಿ BNS-2023ರ ಕಲಂ 331(4) ಹಾಗೂ 305(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

  ವಿಶೇಷ ತನಿಖಾ ತಂಡ ರಚನೆ :  ಇತ್ತೀಚೆಗೆ ನಡೆಯುತ್ತಿರುವ ಮನೆಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಶೀಘ್ರವಾಗಿ ಭೇದಿಸುವಂತೆ ಸೂಚನೆ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗೋಕಾಕ ಡಿವೈಎಸ್‌ಪಿ ಅವರ ನಿರ್ದೇಶನದಂತೆ, ಯಮಕನಮರಡಿ ಪೊಲೀಸ್ ಠಾಣೆಯ ಪಿಐ ಜಾವೀದ ಮುಶಾಪುರಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಿ.ಕೆ.ಪಾಟೀಲ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

   ಈ ತಂಡದಲ್ಲಿ ಎಎಸ್‌ಐ ಡಿ.ವಾಯ್. ನಾಯ್ಕರ, ಪಿ.ಬಿ.ನಾಯಿಕ (CHC 1250), ಎಂ.ಎಂ. ಕರಗುಪ್ಪಿ (CPC 1230), ಜಿ.ಬಿ. ನಾಗನ್ನವರ (CPC 3105), ಪಿಕೆ ಕಿಳ್ಳಿಕೇತರ (CPC 3278), ಎಂ.ಜಿ.ದಾದಾಮಲಿಕ (CPC 3047) ಹಾಗೂ ಪಿ.ಎ.ಬಂಡಗರ (CPC 3171) ದರೂರು ಇವರು ಕಾರ್ಯನಿರ್ವಹಿಸಿದ್ದರು.

   ಮೂವರು ಆರೋಪಿಗಳ ಬಂಧನ : ವಿಶೇಷ ತನಿಖಾ ತಂಡವು ಆಗಸ್ಟ್ 11ರಂದು ಸಂಶಯಾಸ್ಪದವಾಗಿ ಕಂಡುಬಂದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕಾಟಾಬಳಿ ಗ್ರಾಮದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತರನ್ನು ರಾಮಚಂದ್ರ ಫಕೀರಪ್ಪಾ ತಳವಾರ (22), (ಮೊಹರೆ, ಬೈಲಹೊಂಗಲ ತಾಲೂಕು), ಸುರೇಶ ಲಕ್ಕಪ್ಪಾ ಪಾಟೀಲ (33), (ರಾಜನಕಟ್ಟಿ, ಗೋಕಾಕ ತಾಲೂಕು), ಹಾಗೂ ಯಲ್ಲಪ್ಪಾ ಸೋಮನಿಂಗ ದಂಡು (20), (ತವಗ, ಗೋಕಾಕ ತಾಲೂಕು) ಎಂದು ಗುರುತಿಸಲಾಗಿದೆ.

   ಆರೋಪಿಗಳಿಂದ ಕಳುವಾಗಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

   ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ವಿಶೇಷ ತನಿಖಾ ತಂಡದ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.