ಆಸ್ತಿ ತೆರಿಗೆ ಪಾವತಿಗೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಮೂರು ಜನಸ್ನೇಹಿ ಸೇವೆ
ಮಹಾನಗರ ಪಾಲಿಕೆ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,71,000 ಆಸ್ತಿಗಳಿವೆ. ಆಸ್ತಿ ತೆರಿಗೆ ಸೇವೆಗಳಿಗಾಗಿ ವಿಶೇಷ ಸಾಫ್ಟ್ವೇರ್ ಅಳವಡಿಸಲಾಗಿದ್ದು, ಬಾಕಿ ತೆರಿಗೆ ವಿವರಗಳನ್ನು ತೆರಿಗೆದಾರರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಕಳುಹಿಸಲಾಗುವುದು ಎಂದರು.
ವಾಟ್ಸಾಪ್ ಚಾಟ್ಬಾಟ್ ಸಂಖ್ಯೆ 7090022888 ಮೂಲಕ ಈಗಾಗಲೇ ಪಾವತಿಸಿದ ತೆರಿಗೆ, ಬಾಕಿ ಮೊತ್ತ ಮತ್ತು ಪ್ರಸಕ್ತ ಸಾಲಿನಲ್ಲಿ ಪಾವತಿಸಬೇಕಾದ ತೆರಿಗೆಯ ವಿವರಗಳನ್ನು ಪಡೆಯಬಹುದು. ಹಿಂದಿನ ಬಾಕಿ ಪಾವತಿಸಿದ ಬಳಿಕ ಪ್ರಸಕ್ತ ಸಾಲಿನ ತೆರಿಗೆ ಪಾವತಿಗೆ ಅವಕಾಶ ದೊರೆಯುತ್ತದೆ. ಬಿಬಿಪಿಎಸ್ ಮೂಲಕ ಪೇಟಿಎಂ, ಗೂಗಲ್ ಪೇ ಮತ್ತು ಫೋನ್ಪೇ ಬಳಸಿ ಆಸ್ತಿ ತೆರಿಗೆ ಪಾವತಿಸಬಹುದು ಎಂದು ಅವರು ವಿವರಿಸಿದರು.
ನಾಗರಿಕರು ಪಾಲಿಕೆಯ ತೆರಿಗೆ ಪಾವತಿ ಕೇಂದ್ರಗಳಿಗೆ ತೆರಳುವ ಅಗತ್ಯವಿಲ್ಲದೆ, ಮನೆಯಲ್ಲಿಯೇ ಮೊಬೈಲ್ ಮೂಲಕ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಆಸ್ತಿಗಳ ತೆರಿಗೆ ಪಾವತಿಸಬಹುದು. ನಗರದ ಅಭಿವೃದ್ಧಿ ಕಾರ್ಯಗಳಿಗೆ ಆಸ್ತಿ ತೆರಿಗೆ ಆದಾಯ ಮುಖ್ಯವಾಗಿದ್ದು, ನಾಗರಿಕರು ಈ ಸೇವೆಗಳನ್ನು ಬಳಸಿಕೊಂಡು ಸಕಾಲದಲ್ಲಿ ತೆರಿಗೆ ಪಾವತಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು.
ಪಾಲಿಕೆ ಕಂದಾಯ ಶಾಖೆಯ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಅಭಿವೃದ್ಧಿ ಶಾಖೆಯ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.