ರಸ್ತೆ ಸುರಕ್ಷತೆಗೆ Rs.322 ಕೋಟಿ ಕ್ರಿಯಾ ಯೋಜನೆ: ಅಪಘಾತ ಸಂತ್ರಸ್ತರಿಗೆ Rs.2.50 ಲಕ್ಷವರೆಗೆ ನಗದುರಹಿತ ಚಿಕಿತ್ಸೆ
ತಮ್ಮ ಅಧ್ಯಕ್ಷತೆಯಲ್ಲಿ ನಡೆದ 24ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯ ಬಳಿಕ ಮಾತನಾಡಿದ ಅವರು, ಕ್ರಿಯಾ ಯೋಜನೆಯಲ್ಲಿ ಮುಂದುವರಿದ ಕಾಮಗಾರಿಗಳಿಗೆ ₹233.11 ಕೋಟಿ ಮತ್ತು ಹೊಸ ಕಾಮಗಾರಿಗಳಿಗೆ ₹88.89 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು. ರಸ್ತೆ ಸುರಕ್ಷತೆಗಾಗಿ ಪೊಲೀಸ್, ಸಾರಿಗೆ, ಆರೋಗ್ಯ, ಲೋಕೋಪಯೋಗಿ, ನಗರಾಭಿವೃದ್ಧಿ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ತುರ್ತು ಚಿಕಿತ್ಸೆಗೆ ₹2.50 ಲಕ್ಷವರೆಗೆ ನೆರವು
2026ರ ಏಪ್ರಿಲ್ 15ರಿಂದ ಜಾರಿಯಲ್ಲಿರುವ ‘ಪಿಎಂ-ರಹತ್’ ಯೋಜನೆಯಡಿ ರಸ್ತೆ ಅಪಘಾತ ಸಂತ್ರಸ್ತರಿಗೆ ಏಳು ದಿನಗಳವರೆಗೆ ಗರಿಷ್ಠ ₹1.50 ಲಕ್ಷದ ನಗದುರಹಿತ ಚಿಕಿತ್ಸೆ ದೊರೆಯಲಿದೆ. ‘ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ’ ಯೋಜನೆಯಡಿ ಹೆಚ್ಚುವರಿ ₹1 ಲಕ್ಷ ಸೇರಿ ಒಟ್ಟು ₹2.50 ಲಕ್ಷದವರೆಗೆ ಚಿಕಿತ್ಸಾ ನೆರವು ಲಭ್ಯವಿದೆ. ರಾಜ್ಯದ 3,445 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗಿವೆ ಎಂದು ಅವರು ತಿಳಿಸಿದರು.
ತುರ್ತು ಸ್ಪಂದನೆ ಸುಧಾರಿಸಲು 108 ಮತ್ತು 102 ಸೇವೆಗಳನ್ನು 112 ಸಹಾಯವಾಣಿಯೊಂದಿಗೆ ಜೋಡಿಸಲಾಗಿದೆ. ಮೂಲ ಜೀವ ರಕ್ಷಣಾ ಸೌಲಭ್ಯ ಹೊಂದಿರುವ 100 ಹೊಸ ಬಿಎಲ್ಎಸ್ ಆಂಬುಲೆನ್ಸ್ಗಳ ಖರೀದಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅವು ಸೇವೆಗೆ ಲಭ್ಯವಾಗಲಿವೆ. ಜಿಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ.
27 ಸ್ಥಳಗಳಲ್ಲಿ ಎಐ ಕ್ಯಾಮೆರಾ ಅಳವಡಿಕೆ
ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತ ಎಸಗಿ ಪರಾರಿಯಾಗುವ ವಾಹನಗಳನ್ನು ಪತ್ತೆಹಚ್ಚಲು ಗುರುತಿಸಿರುವ 87 ಸ್ಥಳಗಳಲ್ಲಿ 27 ಕಡೆ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಪೈಕಿ 20 ಕಡೆ ಇ-ಚಲನ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 6,500 ಚಲನ್ಗಳನ್ನು ದಾಖಲಿಸಲಾಗಿದೆ. ಉಳಿದ 60 ಸ್ಥಳಗಳಲ್ಲಿ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗುರುತಿಸಿರುವ ಅಪಘಾತಪ್ರವಣ ಸ್ಥಳಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಸುಧಾರಣಾ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ.
ಚಾಲನಾ ಪರವಾನಗಿ ಪರೀಕ್ಷೆಗೂ ಮುನ್ನ ಎಲ್ಲ ಅಭ್ಯರ್ಥಿಗಳಿಗೆ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಬಳಕೆ, ವೇಗ ನಿಯಂತ್ರಣ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಚಾಲನೆ ವೇಳೆ ಮೊಬೈಲ್ ಬಳಸುವುದರ ಮೇಲಿನ ನಿಷೇಧ ಕುರಿತು ಜಾಗೃತಿ ವಿಡಿಯೋ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ವಿಡಿಯೋ ವೀಕ್ಷಿಸಿ ನಿಯಮಗಳನ್ನು ಅರಿತಿರುವ ಬಗ್ಗೆ ಅಭ್ಯರ್ಥಿಗಳಿಂದ ಸಹಿ ಪಡೆಯುವ ವ್ಯವಸ್ಥೆ ಜಾರಿಗೊಳಿಸುವಂತೆಯೂ ಸೂಚಿಸಲಾಗಿದೆ. ಚಾಲನಾ ತರಬೇತಿ ಸಂಸ್ಥೆಗಳ ಮೇಲೆ ನಿರಂತರ ನಿಗಾ ಇಡುವಂತೆ ಇಲಾಖೆಗೆ ತಿಳಿಸಲಾಗಿದೆ.
ಪ್ರತಿ 10 ಸಾವಿರ ವಾಹನಗಳಿಗೆ ಅಪಘಾತ ದರ ಶೇ. 27ರಷ್ಟು ಇಳಿಕೆ
2018ರಿಂದ 2025ರ ಅವಧಿಯಲ್ಲಿ ಪ್ರತಿ 10 ಸಾವಿರ ನೋಂದಾಯಿತ ವಾಹನಗಳಿಗೆ ಸಂಭವಿಸಿದ ಅಪಘಾತಗಳ ಪ್ರಮಾಣ 17.28ರಿಂದ 12.56ಕ್ಕೆ ಇಳಿದಿದ್ದು, ಶೇ. 27ರಷ್ಟು ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಪ್ರತಿ 10 ಸಾವಿರ ವಾಹನಗಳಿಗೆ ರಸ್ತೆ ಅಪಘಾತದಿಂದ ಸಂಭವಿಸಿದ ಸಾವಿನ ಪ್ರಮಾಣ 4.55ರಿಂದ 3.59ಕ್ಕೆ ಇಳಿದಿದ್ದು, ಶೇ. 21ರಷ್ಟು ಕಡಿಮೆಯಾಗಿದೆ. 2026ರ ಜನವರಿಯಿಂದ ಅಕ್ಟೋಬರ್ವರೆಗೆ ರಾಜ್ಯದಲ್ಲಿ 37,443 ರಸ್ತೆ ಅಪಘಾತಗಳು ಸಂಭವಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೃತಪಟ್ಟವರ ಸಂಖ್ಯೆ 220ರಷ್ಟು ಕಡಿಮೆಯಾಗಿದೆ ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು.
ರಸ್ತೆ ಸುರಕ್ಷತೆ ಕುರಿತು ಮಾಧ್ಯಮಗಳು, ಚಿತ್ರಮಂದಿರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗುವುದು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಚಾರ ವಿಭಾಗದ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.