ವಿಶ್ವಗುರು ಬಸವಣ್ಣನವರ ತೇಜೋವಧೆ ಅಕ್ಷಮ್ಯ ಅಪರಾಧ: ಅನಿಲ ಮೆಣಸಿನಕಾಯಿ
ಗದಗ 23: ಸಮಾನತೆ, ಮಾನವೀಯತೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ಕ್ರಾಂತಿಕಾರಿ ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ರಚಿಸಿರುವ ಬಸವ ಮಂಟಪ ಕೃತಿಯಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಕಟಿಸಿದ್ದು, ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯ ಹಾಗೂ ಶರಣ ಸಂಸತಿಗೆ ಧಕ್ಕೆ ತರುವ ಇಂತಹ ಪ್ರಯತ್ನ ಖಂಡನೀಯ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಬಸವ ಮಂಟಪ ಕೃತಿಯಲ್ಲಿ ಮತ್ತು ಅದರ ಕುರಿತು ನೀಡಿದ ಸಂದರ್ಶನದಲ್ಲಿ ವಿಶ್ವಗುರು ಬಸವಣ್ಣನವರನ್ನು ಕಳ್ಳತನ ಹಾಗೂ ಬಿಜ್ಜಳನ ಹತ್ಯೆಯೊಂದಿಗೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಲಿಂಗಾಯತ ಪದವನ್ನು ಅವಹೇಳನಕಾರಿಯಾಗಿ ತಿರುಚಿರುವುದು ಮತ್ತು ವೀರಶೈವ ಲಿಂಗಾಯತ ಸಮುದಾಯ ಹಾಗೂ ಶರಣ ಪರಂಪರೆಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದು.
ರಾಜ್ಯದ ಕೋಟ್ಯಂತರ ಬಸವ ಭಕ್ತರ ಭಾವನೆಗಳಿಗೆ ನೋವು ಉಂಟುಮಾಡಿದೆ. ಬಸವಣ್ಣನವರು ಒಂದು ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತವಾದ ಮಹಾಪುರುಷರಲ್ಲ. ಅವರು ಕನ್ನಡನಾಡಿನ ಸಾಂಸತಿಕ ರಾಯಭಾರಿ, ಸಮಸ್ತ ಮಾನವಕುಲದ ಮಾರ್ಗದರ್ಶಕ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವದ ಹರಿಕಾರರು ಆಗಿದ್ದಾರೆ.
ವಿವಾದ ತೀವ್ರಗೊಂಡ ನಂತರವೂ ಲೇಖಕ ರವಿ ಹಂಜ್ ಅವರು ತಮ್ಮ ಬರಹ ಮತ್ತು ಹೇಳಿಕೆ ತಪ್ಪಾಗಿದೆ ಎಂದು ಒಪ್ಪಿಕೊಂಡು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸಿಲ್ಲ. ರವಿ ಹಂಜ್ ಮತ್ತು ಪ್ರಕಾಶಕರ ಮೇಲೆ ಸರ್ಕಾರ ತುರ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.