ಮುಂದಗೋಡ

‘ಗೊಂದಲದ ಬಸವ ಮಂಟಪ’ ಪುಸ್ತಕ ವಿವಾದದ ತನಿಖೆಗೆ ಮಾತೆ ಬಸವೇಶ್ವರಿ ಆಗ್ರಹ

‘ಗೊಂದಲದ ಬಸವ ಮಂಟಪ’ ಪುಸ್ತಕ ವಿವಾದದ ತನಿಖೆಗೆ ಮಾತೆ ಬಸವೇಶ್ವರಿ ಆಗ್ರಹ
Mathe Basaveshwari demands an inquiry into the controversy surrounding the book ‘Gondalada Basava M

 ಲೋಕದರ್ಶನ ವರದಿ 

               ಮುಂಡಗೋಡ 23: ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶ ಹಾಗೂ ವಚನ ಸಾಹಿತ್ಯದ ಕುರಿತು ವಿವಾದಾತ್ಮಕ ಮತ್ತು ಅವಹೇಳನಕಾರಿ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ‘ಗೊಂದಲದ ಬಸವ ಮಂಟಪ’ ಪುಸ್ತಕದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಸವಧಾಮದ ಮಾತೆ ಬಸವೇಶ್ವರಿ ಆಗ್ರಹಿಸಿದರು.

             ಈ ಸಂಬಂಧ ಬಸವಪರ ಸಂಘಟನೆಗಳ ಪ್ರಮುಖರು ಸೋಮವಾರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತೆ ಬಸವೇಶ್ವರಿ, ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶ, ವಚನ ಸಾಹಿತ್ಯ ಹಾಗೂ ಸಾಮಾಜಿಕ ಸುಧಾರಣಾ ಚಳವಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಅಂಶಗಳು ಪ್ರಕಟವಾಗಿವೆ                           ಎಂಬ ಆರೋಪಕ್ಕೆ ನಾಡಿನಾದ್ಯಂತ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದರು. ‘ಗೊಂದಲದ ಬಸವ ಮಂಟಪ’ ಪುಸ್ತಕದಲ್ಲಿನ ವಿವಾದಾತ್ಮಕ ಅಂಶಗಳು, ರವಿ ಹಂಜ ಅವರ ಬರಹಗಳು ಹಾಗೂ ಈ ವಿಚಾರಗಳು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಲು ಸಹಕರಿಸಿದ್ದಾರೆ ಎನ್ನಲಾದ ವಿಶ್ವೇಶ್ವರ ಭಟ್ ಸೇರಿದಂತೆ ಸಂಬಂಧಪಟ್ಟವರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

                  ಬಸವಣ್ಣನವರ ಇತಿಹಾಸ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಅಂಶಗಳ ಸತ್ಯಾಸತ್ಯತೆಯನ್ನು ಪರೀಶೀಲಿಸಬೇಕು. ಈ ವಿಚಾರವಾಗಿ ಸಮಾಜದಲ್ಲಿ ಗೊಂದಲ ಅಥವಾ ಅಶಾಂತಿ ಉಂಟಾಗದಂತೆ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

             ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್‌. ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್‌.ಟಿ. ಪಾಟೀಲ, ಸಮಾಜದ ಮುಖಂಡರಾದ ಬಿ.ಕೆ. ಪಾಟೀಲ, ಸಂಗಪ್ಪ ಕೋಳೂರ, ವಸಂತ ಕೊಣಸಾಲಿ, ಎಸ್‌.ಬಿ. ಹೂಗಾರ, ಸುರೇಶ ಕುಲ್ಲೋಳ್ಳಿ, ಬಿ.ಡಿ. ಹೊತಗಣ್ಣವರ, ಬಸವರಾಜ ಒಸಿಮಠ, ಆರ್‌.ಜೆ. ಬೆಳ್ಳೆನವರ, ಎಸ್ ಪಕ್ಕೀರ​‍್ಪ, ರವಿ ಗೌಡ್ ಪಾಟೀಲ, ಬಸವರಾಜ ಸಂಗಮೇಶ್ವರ, ಕೆಂಜೋಡಿ ಗಲಬಿ, ರಾಜು ಕುಟ್ರಿ, ಸೇರಿದಂತೆ ಬಸವಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ