ಭಕ್ತಿಭಾವದ ಸಂಭ್ರಮದಲ್ಲಿ ಬಾಳೆಕೊಪ್ಪ; ಈಶ್ವರ ಬಸವೇಶ್ವರ ನೂತನ ದೇವಸ್ಥಾನ ಲೋಕಾರೆ್ಣ
ಲೋಕದರ್ಶನ ವರದಿ
ಮುಂಡಗೋಡ 23 : ತಾಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ಈಶ್ವರ ಬಸವೇಶ್ವರ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನವಾಗಿ ನಿರ್ಮಿಸಲಾದ ದೇವಸ್ಥಾನದ ಲೋಕಾರೆ್ಣ ಕಾರ್ಯಕ್ರಮ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ನ.22ರ ಭಾನುವಾರ ಗೋಧೂಳಿ ಸಮಯದಲ್ಲಿ ಆಲಯ ಪ್ರವೇಶ, ಗಂಗಾಪೂಜೆ, ನಂದಿಧ್ವಜ ಸ್ಥಾಪನೆ, ಕಲಶಪೂಜೆ, ಗಣಪತಿ ಪುಣ್ಯಾಹ, ಗಣಹೋಮ, ರುದ್ರಹೋಮ ಹಾಗೂ ಜಯಾದಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನ.23ರ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ದೇವತಾ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಬಳಿಕ ಅಭಿಷೇಕ, ಅಷ್ಟೋತ್ತರ, ಕಲಶಾರೋಹಣ, ಕಲಶಾಭಿಷೇಕ, ಪೂರ್ಣಾಹುತಿ, ನೇತ್ರೋನ್ಮೀಲನ, ಕಲಾನ್ಯಾಸ ಹಾಗೂ ಮಂತ್ರೋಪದೇಶ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ನಡೆದವು. ಮಧ್ಯಾಹ್ನ 12.10ಕ್ಕೆ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾನಮಠದ ಷ.ಬ್ರ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಜಡೆ ವೀರಕ್ತಮಠದ ಮ.ನಿ.ಪ್ರ. ಡಾ. ಮಹಾಂತ ಸ್ವಾಮಿಗಳು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಚನ ನೀಡಿದರು.
ಶ್ರೀಗಳ ಆಶೀರ್ವಾದದೊಂದಿಗೆ ದೇವಸ್ಥಾನದ ಲೋಕಾರೆ್ಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಪನ್ನಗೊಂಡಿತು. ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳ ಪೌರೋಹಿತ್ಯವನ್ನು ಸೋರಣಗಿಯ ಹಿರೇಮಠದ ವೇ. ಕರಿಬಸಯ್ಯ ಶಾಸ್ತ್ರಿಗಳು ಹಾಗೂ ಸಹ ಶಾಸ್ತ್ರಿ ವರ್ಗದವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕರಿಸಿದರು.