ಬೆಳಗಾವಿ

ಅತಿಕ್ರಮಣ ತೆರವು ವೇಳೆ ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ: ಕಾರ್ಯಾಚರಣೆ ವೇಳೆ ಕಲ್ಲು ತೂರಾಟ, ಜೆಸಿಬಿ ಗಾಜು ಪುಡಿಪುಡಿ

ಅತಿಕ್ರಮಣ ತೆರವು ವೇಳೆ ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ:  ಕಾರ್ಯಾಚರಣೆ ವೇಳೆ ಕಲ್ಲು ತೂರಾಟ, ಜೆಸಿಬಿ ಗಾಜು ಪುಡಿಪುಡಿ
Assault on Corporation Staff During Encroachment Clearance: Stone-Pelting During Operation; JCB Wind

ಬೆಳಗಾವಿ : ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಸ್ಥಳೀಯರು ಮತ್ತು ಅಂಗಡಿಕಾರರು ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ. ಘಟನೆಯಲ್ಲಿ ಜೆಸಿಬಿ ಯಂತ್ರದ ಗಾಜುಗಳನ್ನು ಪುಡಿಗೈದು, ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಅಡ್ಡಿಪಡಿಸಲಾಗಿದೆ. ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಂಎಲ್‌ಸಿ (MLC) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  ಬೆಳಗಾವಿಯ ಶಹಾಪುರದ ಬ್ಯಾರಿಸ್ಟರ್ ನಾಥ್ ಪೈ ಸರ್ಕಲ್‌ನಿಂದ ಖಾಸಬಾಗದ ಬಸವೇಶ್ವರ ಮಾರ್ಗದವರೆಗೆ ಇರುವ ಅನಧಿಕೃತ ಅತಿಕ್ರಮಣಗಳನ್ನು ತೆರವುಗೊಳಿಸಲು ಶುಕ್ರವಾರ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಲು ಮುಂದಾಗಿದ್ದರು.

    ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಅಭಿಯಂತರ ಅನಿಕೇತ ಹಾಗೂ ಪಾಲಿಕೆ ಸಿಬ್ಬಂದಿ ಅತಿಕ್ರಮಣ ತೆರವುಗೊಳಿಸುವ ಕುರಿತು ಮುನ್ನೆಚ್ಚರಿಕೆ ನೀಡಿದ್ದರು. ಬಳಿಕ ಸಂಜೆ ಜೆಸಿಬಿ ಯಂತ್ರದೊಂದಿಗೆ ತೆರವು ಕಾರ್ಯಾಚರಣೆಗೆ ಸಿಬ್ಬಂದಿ ಸ್ಥಳಕ್ಕೆ ಮರಳಿದಾಗ, ಸ್ಥಳೀಯರು ಹಾಗೂ ಅಂಗಡಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.

   ಈ ವೇಳೆ ಆಕ್ರೋಶಗೊಂಡ ಗುಂಪು ಅಭಿಯಂತರ ಅನಿಕೇತ ಹಾಗೂ ಅವರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ ಜೆಸಿಬಿ ಯಂತ್ರದ ಗಾಜುಗಳನ್ನು ಒಡೆದುಹಾಕಿ, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಲಾಗಿದೆ.

 ಸ್ಥಳಕ್ಕೆ ಧಾವಿಸಿದ ಪಾಲಿಕೆ ಅಧಿಕಾರಿಗಳು :

     ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸಿಬ್ಬಂದಿಗೆ ಧೈರ್ಯ ತುಂಬಿದರು. ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹಾಗೂ ಉಪಾಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಅವರು ಸಿಬ್ಬಂದಿಗೆ ಸಾಂತ್ವನ ಹೇಳಿದರು.

    ಘಟನೆಯನ್ನು ಸ್ಥಳದಲ್ಲೇ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಕೆಲ ಸ್ಥಳೀಯರು ಪ್ರಯತ್ನಿಸಿದರು. ಆದರೆ, ಈ ಸಂದರ್ಭದಲ್ಲಿ ಮಾತನಾಡಿದ ಉಪಾಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಅವರು, ಪಾಲಿಕೆ ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ; ನ್ಯಾಯಾಲಯದ ಆದೇಶದಂತೆ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

    ನ್ಯಾಯಾಲಯದ ಆದೇಶದ ಬಗ್ಗೆ ಆಕ್ಷೇಪವಿದ್ದರೆ ಸಂಬಂಧಪಟ್ಟವರು ನ್ಯಾಯಾಲಯದ ಮೊರೆ ಹೋಗಬೇಕು. ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.


 ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲು : 

   ಈ ಘಟನೆಗೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಂಎಲ್‌ಸಿ (MLC) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಲಿಕೆ ಸಿಬ್ಬಂದಿ ಮೇಲಿನ ಹಲ್ಲೆ ಹಾಗೂ ಜೆಸಿಬಿ ಯಂತ್ರದ ಗಾಜು ಒಡೆದ ಪ್ರಕರಣದ ಕುರಿತು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


ಸುದ್ದಿ ಓದಿ