ರೈತನ ಮನೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಹಾನಿ : ಹಲವಾರು ವಸ್ತುಗಳು ಬೆಂಕಿಗೆ ಆಹುತಿ
ಬೆಳಗಾವಿ : ಬಡ ರೈತನ ಮನೆಯೊಂದಕ್ಕೆ ಬೆಂಕಿ ಬಿದ್ದು ಲಕ್ಷಾಂ
ತರ ರೂಗಳ ಮೌಲ್ಯದ ಗೃಹೋಪಯೋಗಿ ಸೇರಿದಂತೆ ಕೆಲವಸ್ತುಗಳು, ದಾಖಲೆಗಳು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ನಿಪ್ಪಾನಿ ಪಟ್ಟಣದಲ್ಲಿ ಗುರುವಾರ ನಡೆದಿದೆ.
ನಿಪ್ಪಾನಿ ಪಟ್ಟಣದ ರಾಮಮಂದಿರದ ಪರಿಸರದಲ್ಲಿರುವ ಚೈತನ್ಯ ಶಶಿಕಾಂತ ನೇಸರಿಕರ್ ಅವರಿಗೆ ಸೇರಿದ ಹಳೆಯ ಮನೆಯೊಂದಕ್ಕೆ ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಅಪಾರ ಹಾನಿ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ ಟಿವಿ, ಫ್ರಿಜ್, ಪ್ರಮುಖ ದಾಖಲೆಗಳು ಸೇರಿದಂತೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಂದಾಜು 20 ಲಕ್ಷ ನಷ್ಟವಾಗಿದೆ. ಅದೃಷ್ಟವಶಾತ್, ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.
ಮನೆಯೊಳಗಿಂದ ದಟ್ಟ ಹೊಗೆ; ಅಗ್ನಿಶಾಮಕ ದಳದ ಕಾರ್ಯಾಚರಣೆ :
ರಾಮಮಂದಿರದ ಪರಿಸರದಲ್ಲಿ ನೇಸರಿಕರ್ ಕುಟುಂಬವು ಹಲವು ವರ್ಷಗಳಿಂದ ಮಣ್ಣಿನ ಗೋಡೆಗಳು ಹಾಗೂ ಹೆಂಚಿನ ಮೇಲ್ಛಾವಣಿ ಹೊಂದಿರುವ ಹಳೆಯ ಮನೆಯಲ್ಲಿ ವಾಸವಾಗಿತ್ತು. ಮನೆಯ ಒಂದು ಭಾಗವನ್ನು ರಾಮಮಂದಿರದ ಸಾಮಗ್ರಿಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು.
ಗುರುವಾರ ಬೆಳಿಗ್ಗೆ ನೇಸರಿಕರ್ ಅವರು ಯರನಾಳದಲ್ಲಿರುವ ತಮ್ಮ ಹೊಲಕ್ಕೆ ತೆರಳಿದ್ದರು. ಅವರ ಪತ್ನಿ ಮಕ್ಕಳೊಂದಿಗೆ ಶಿಂತ್ರೆ ಕಾಲನಿಯಲ್ಲಿರುವ ಸಹೋದರಿಯ ಮನೆಗೆ ತೆರಳುವಾಗ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಬೆಳಿಗ್ಗೆ ಸುಮಾರು 11 ಗಂಟೆಗೆ ಮನೆಯೊಳಗಿಂದ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ನಿಪ್ಪಾಣಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿತು. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಗ್ನಿಶಾಮಕ ವಾಹನವನ್ನು ಕೂಡ ಕರೆಸಲಾಯಿತು.
ಅಗ್ನಿಶಾಮಕ ಸಿಬ್ಬಂದಿ, ಕಾರ್ಖಾನೆಯ ತುರ್ತು ಪರಿಸ್ಥಿತಿ ನಿರ್ವಹಣಾ ತಂಡ ಹಾಗೂ ಸ್ಥಳೀಯ ನಾಗರಿಕರು ಸುಮಾರು ಒಂದು ಗಂಟೆ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದರೆ, ಅಷ್ಟರಲ್ಲಾಗಲೇ ಮನೆಯಲ್ಲಿದ್ದ ಟಿವಿ, ಫ್ರಿಜ್, ಪ್ರಮುಖ ದಾಖಲೆಗಳು ಹಾಗೂ ಇತರ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು.
ಶಾರ್ಟ್ ಸರ್ಕ್ಯೂಟ್ ಶಂಕೆ :
ಪ್ರಾಥಮಿಕ ಅಂದಾಜಿನ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಿಂದ ಸುಮಾರು 20 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ನಂದಿಸಲು ನಾಗರಿಕರ ಸಹಕಾರ :
ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳೀಯ ಯುವಕರು ಹಾಗೂ ನಾಗರಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಲ್ಲದೆ, ಮನೆಯಲ್ಲಿದ್ದ ವಸ್ತುಗಳನ್ನು ಹೊರತೆಗೆಯಲು ಸಹಕರಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಶಂಕರ ಕೋರೆ, ಮಹೇಶ ಮಾಳಗಿಮಠ, ಜಗದೀಶ ಕಾಂಬಳೆ, ಸಂಜಯ ದಳವಿ ಹಾಗೂ ವಿಲಾಸ ನಾಯ್ಕ್ ಸೇರಿದಂತೆ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ತುರ್ತು ನಿರ್ವಹಣಾ ತಂಡದ ಸದಸ್ಯರು ಮತ್ತು ಸ್ಥಳೀಯರು ನೆರವು ನೀಡಿದರು.
ಸ್ಥಳೀಯರ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.