ಕಾಗವಾಡದಲ್ಲಿ ಪೂರ್ವಿಭಾವಿ ಸಭೆ; ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆಗೆ ಸಕಲ ಸಿದ್ಧತೆ
ಲೋಕದರ್ಶನ ವರದಿ
ಕಾಗವಾಡ 15: ಮುಂಬರುವ ವಾಲ್ಮೀಕಿ ಜಯಂತಿಯನ್ನು ತಾಲೂಕಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಯನ್ನು ವಾಲ್ಮೀಕಿ ಭವನಕ್ಕಾಗಿ ಉದ್ದೇಶಿಸಿರುವ ಸ್ಥಳದಿಂದ ಆರಂಭಿಸಿ, ಚೆನ್ನಮ್ಮ ವೃತ್ತ, ಮಲ್ಲಿಕಾರ್ಜುನ ಮಹಾವಿದ್ಯಾಲಯದ ಆವರಣದ ವರೆಗೆ ನಡೆಸಿ, ಅಲ್ಲಿ ಮುಖ್ಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಹಶೀಲ್ದಾರ ರವೀಂದ್ರ ಹಾದಿಮನಿ ತಿಳಿಸಿದ್ದಾರೆ. ಅವರು, ಬುಧವಾರ ದಿ. 14 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಕ್ಟೋಬರ್ 26 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯ ಸಿದ್ಧತೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸುವ ಉದ್ದೇಶದಿಂದ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಮೆರವಣಿಗೆ ಮತ್ತು ಕಾರ್ಯಕ್ರಮದ ಕುರಿತು ವಾಲ್ಮೀಕಿ ಸಮಾಜದ ಮುಖಂಡರ ಒಮ್ಮತದ ಅಭಿಪ್ರಾಯದಂತೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ ಪತ್ತಾರ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿ ಸಮಾಜದ ಮುಖಂಡರು ತಮ್ಮ ಸಲಹೆ-ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.