ಸಂಕೇಶ್ವರದಿಂದ ಗುಡ್ಡಾಪುರಕ್ಕೆ 25ನೇ ವರ್ಷದ ಪಾದಯಾತ್ರೆ ಭಕ್ತಿಭಾವದಿಂದ ಆರಂಭ
ಸಂಕೇಶ್ವರ: ಸಂಕೇಶ್ವರದಿಂದ ಗುಡ್ಡಾಪುರದವರೆಗೆ ನಡೆಯುವ ಶ್ರೀ ದಾನಮ್ಮದೇವಿ (ತ್ರಿಕಾಲ ಪೂಜಿತೆ) ವರದಾನೇಶ್ವರಿ ದೇವಿಯ 25ನೇ ವರ್ಷದ ಪಾದಯಾತ್ರೆಯು ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಜರುಗಿತು.
ಹತ್ತರಗಿಯ ಕಾರಿಮಠದ ಗುರುಸಿದ್ದೇಶ್ವರ ಮಹಾಸ್ವಾಮೀಜಿಗಳು ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸಂಕೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್ತರಿಗೆ ಶ್ರೀ ದಾನಮ್ಮದೇವಿಯ ಆಶೀರ್ವಾದ ಸದಾ ಇರಲಿ. ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತಾಪಿ ವರ್ಗಕ್ಕೆ ಒಳಿತಾಗಲಿ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರ ಇಷ್ಟಾರ್ಥಗಳು ಈಡೇರಲಿ ಎಂದು ಹಾರೈಸಿದರು.
ಈ ಪಾದಯಾತ್ರೆಯು ಐದು ದಿನಗಳ ಕಾಲ ನಡೆಯಲಿದೆ. ಇದರ ಅಂಗವಾಗಿ ಡಿಸೆಂಬರ್ 2ರ ಬುಧವಾರ ಸಂಜೆ 7 ಗಂಟೆಗೆ ಗುಡ್ಡಾಪುರದಲ್ಲಿ ಸಂಕೇಶ್ವರದ ಪಾದಯಾತ್ರೆಯ ನಿಮಿತ್ತ ಭವ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ.
ಮರುದಿನ ಡಿಸೆಂಬರ್ 3ರಂದು ಗುರುವಾರ ಬೆಳಿಗ್ಗೆ ಶ್ರೀ ದಾನಮ್ಮದೇವಿಗೆ ಮಹಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ, ದಂಡಿ ಕಟ್ಟುವ ಧಾರ್ಮಿಕ ವಿಧಿವಿಧಾನಗಳು ಹಾಗೂ ಹೋಳಿಗೆಯ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ ಸಂಕೇಶ್ವರದ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಡಿ. 5ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಜರುಗಲಿದೆ.
ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದಾನಮ್ಮದೇವಿಯ ಕೃಪಾಶೀರ್ವಾದ ಹಾಗೂ ಮಹಾಪ್ರಸಾದದ ಲಾಭ ಪಡೆದುಕೊಳ್ಳಬೇಕೆಂದು ಶ್ರೀ ದಾನಮ್ಮದೇವಿ ಪಾದಯಾತ್ರೆ ಸಮಿತಿ, ಸಂಕೇಶ್ವರದ ಅಧ್ಯಕ್ಷರು ವಿನಂತಿಸಿದ್ದಾರೆ.