ಹಳೆಯ ಮೋಡಿ ಲಿಪಿಯ ಐತಿಹಾಸಿಕ ಹಸ್ತಪ್ರತಿಗಳ ಅನುವಾದಕ್ಕೆ ಮಹತ್ವದ ಒಪ್ಪಂದ : ಶಂಕರಾಚಾರ್ಯ ಮಠ, ಗೋವಾ ಸರಕಾರ ನಡುವೆ ಐತಿಹಾಸಿಕ ಒಡಂಬಡಿಕೆ
ಸಂಕೇಶ್ವರ : ಹಳೆಯ ಮೋಡಿ ಲಿಪಿಯಲ್ಲಿ ಲಭ್ಯವಿರುವ ಅಮೂಲ್ಯ ಐತಿಹಾಸಿಕ ಹಸ್ತಪ್ರತಿಗಳು ಹಾಗೂ ದಾಖಲೆಗಳನ್ನು ಅನುವಾದಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಉದ್ದೇಶದಿಂದ ಸಂಕೇಶ್ಚರದ ಶಂಕರಾಚಾರ್ಯ ಸಂಸ್ಥಾನ ಮಠ, ಸಂಕೇಶ್ವರ–ಕರವೀರ ಮತ್ತು ಗೋವಾ ಸರ್ಕಾರದ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಗೋವಾ ಸಚಿವಾಲಯದಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮವು ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಸಂಕೇಶ್ಚರ ಶಂಕರಾಚಾರ್ಯರ ಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹಭಾರತಿ ಶ್ರೀಗಳು ಹಾಗೂ ಶಂಕರಾಚಾರ್ಯ ಮಠದ ಉತ್ತರಾಧಿಕಾರಿ ಶಂಕರಭಾರತಿ
ಶ್ರೀಗಳ ಪ್ರಮುಖ ಉಪಸ್ಥಿತಿಯಲ್ಲಿ ನೆರವೇರಿತು.
ಮೋಡಿ ಲಿಪಿಯಲ್ಲಿ ಸಂರಕ್ಷಿತವಾಗಿರುವ ಭಾರತೀಯ ಇತಿಹಾಸ, ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಜ್ಞಾನಸಂಪತ್ತನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ ಮೈಲಿಗಲ್ಲಾಗಿದೆ. ಈ ಯೋಜನೆಯ ಮೂಲಕ ಪ್ರಾಚೀನ ಹಸ್ತಪ್ರತಿಗಳು ಮತ್ತು ದಾಖಲೆಗಳಲ್ಲಿರುವ ಅಮೂಲ್ಯ ಮಾಹಿತಿಯನ್ನು ಅನುವಾದಿಸಿ, ದಾಖಲಿಸಿ, ಸಂರಕ್ಷಿಸುವ ಕಾರ್ಯಕ್ಕೆ ಹೊಸ ವೇಗ ದೊರೆಯಲಿದೆ.
ನಮ್ಮ ಪೂರ್ವಜರು ಉಳಿಸಿ ಬೆಳೆಸಿದ ಐತಿಹಾಸಿಕ ದಾಖಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಪ್ರಯತ್ನವು ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ಸಂರಕ್ಷಣೆಗೆ ಮಹತ್ವದ ಕೊಡುಗೆಯಾಗಲಿದೆ.
ಇದು ಕೇವಲ ಒಂದು ಒಪ್ಪಂದವಲ್ಲ; ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಇಟ್ಟಿರುವ ಹೆಮ್ಮೆಯ ಐತಿಹಾಸಿಕ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ ಸುಹಾಸ ಕುಲಕರ್ಣಿ, ಗಣಪತಿ ಪಾಟೀಲ, ಸಂಜಯ ಜರಳಿ, ಗೋಪಾಲ ಕುಲಕರ್ಣಿ, ಅಥರ್ವ್ ಫನ್ಸೆಕರ್, ಸಂಜಯ ಶಿಂಧೆ ಇವರುಗಳು ಹಾಜರಿದ್ದರು.