ಮೊಳವಾಡದಲ್ಲಿ ಪ್ರಜಾಸೇವೆ ಆಂದೋಲನ; ಸಮಸ್ಯೆಗಳು ಸಾವಿರಾರು; ಪರಿಹಾರದ ನೀರೀಕ್ಷೆಯಲ್ಲಿ ಗ್ರಾಮಸ್ಥರು..!!
ಲೋಕದರ್ಶನ ವರದಿ
ಕಾಗವಾಡ 28: ತಾಲೂಕಿನ ಕುಸನಾಳ-ಮೊಳವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೊಳವಾಡ ಗ್ರಾಮದ ಸಂಗಮೇಶ್ವರ ದೇವಾಲಯದಲ್ಲಿ ಶನಿವಾರ ದಿ. 28 ರಂದು ಪ್ರಜಾಸೇವೆ ಆಂದೋಲನ ಸಭೆ ನಡೆಯಿತು. ಕೃಷ್ಣಾ ನದಿ ಪ್ರವಾಹದಿಂದ ಸ್ಥಳಾಂತರಗೊಳ್ಳಬೇಕಾಗಿರುವ ಕುಸನಾಳ-ಮೊಳವಾಡ ಗ್ರಾಮಗಳ ಗ್ರಾಮಸ್ಥರಿಂದ ಅನೇಕ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ಥಾಪಿಸಲ್ಪಟ್ಟವು. ಕೆಲವೊಂದು ಸಮಸ್ಯೆಗಳಿಗೆ ಉತ್ತರ ದೊರೆತರೇ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಳಿಯೂ ಉತ್ತರ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡು, ಪರಿಹಾರದ ನೀರೀಕ್ಷೆಯಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ಮಧ್ಯೆ ಕೆಲಹೊತ್ತು ಗೊಂದಲ ನಿರ್ಮಾಣಗೊಂಡಿತು.
ಈ ವೇಳೆ ತಾ.ಪಂ. ಇಓ ವೀರಣ್ಣಾ ವಾಲಿ ಮಾತನಾಡಿ, ಸರ್ಕಾರವೇ ಪ್ರಜೆಗಳ ಬಳಿ ಬಂದು ಅವರ ಸಮಸ್ಯೆಗಳನ್ನು ಆಲಿಸಿ, ತ್ವರಿತವಾಗಿ ಪರಿಹಾರ ನೀಡುವುದೇ ಪ್ರಜಾಸೇವೆಯ ಉದ್ದೇಶವಾಗಿದ್ದು, ಕುಸನಾಳ-ಮೊಳವಾಡ ಗ್ರಾಮವು ಪ್ರವಾಹದಿಂದ ಸ್ಥಳಾಂತರಗೊಳ್ಳಬೇಕಾಗಿದ್ದು, ಇಲ್ಲಿಯ ಬಹಳ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಮಗೆ ಬಂದ ದೂರುಗಳನ್ವಯ ಇಲ್ಲಿ ಪರಿಹಾರ ನೀಡಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಗ್ರೇಡ್-2 ತಹಶೀಲ್ದಾರ ರಷ್ಮಿ ಜಕಾತಿ, ಸಿಡಿಪಿಓ ಸಂಜಯಕುಮಾರ ಸದಲಗಿ, ಕೃಷಿ ಅಧಿಕಾರಿ ನಿಂಗಣ್ಣಾ ಬಿರಾದರ, ಹೆಸ್ಕಾಂ ಎಇಇ ಎ.ಎಸ್. ಮಾಕಣಿ, ಅರಣ್ಯ ಇಲಾಖೆಯ ಮಲ್ಲಪ್ಪಾ ತೇಲಿ, ಬಿಸಿಯೂಟ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಪಿಡಿಓ ಮಲ್ಲಯ್ಯ ಹಿರೇಮಠ, ಮುಖಂಡರಾದ ಅಶೋಕ ನಾಂದಣಿ,
ಚಿದಾನಂದ ಅಥಣಿ, ಪ್ರಕಾಶ ದುಗ್ಗೆ, ಅಮಿತ ಪಾಟೀಲ, ಸತೀಶ ಬಿರಾದರ, ಚನಗೌಡಾ ಕಾಗವಾಡೆ, ಮಾರುತಿ ಕೊಕಣೆ, ರಾಜು ದುಗ್ಗೆ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಮುಖಂಡರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.