ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಿದ್ಯಾರ್ಥಿಗಳ ಬೆಂಬಲ
ಬೆಳಗಾವಿ 28: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಗೌರವಧನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ವಿದ್ಯಾರ್ಥಿಗಳ ಆಗ್ರಹ ದಿನವನ್ನು ಆಚರಿಸಲಾಯಿತು.ಮಹಾತ್ಮ ಜ್ಯೋತಿಬಾ ಫುಲೆ ಅವರ 136ನೇ ಸ್ಮರಣದಿನದ ಅಂಗವಾಗಿ ಎಐಡಿಎಸ್ಒ ಸಂಘಟನೆಯ ನೇತೃತ್ವದಲ್ಲಿ ಬೆಳಗಾವಿಯ ಸರ್ಕಾರಿ ಸರ್ದಾರ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಜ್ಯೋತಿಬಾ ಫುಲೆ ಅವರಿಗೆ ಗೌರವ ಸಲ್ಲಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಸಂಚಾಲಕ ಮಹಾಂತೇಶ್ ಬೀಳೂರು, ಮಹಿಳೆಯರು ಹಾಗೂ ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಜ್ಯೋತಿಬಾ ಫುಲೆ ಅವರು ಜೀವನವೀಡೀ ಶ್ರಮಿಸಿದ್ದಾರೆ. ಮಹಿಳಾ ಶಿಕ್ಷಣಕ್ಕಾಗಿ ಅವರು ನಡೆಸಿದ ಹೋರಾಟದ ಫಲವಾಗಿ ಇಂದು ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ಆದರೆ, ಇಂದು ರಾಜ್ಯದ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಮಾಸಿಕ 15 ಸಾವಿರ ರೂ. ಗೌರವಧನ ನೀಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನವೆಂಬರ್ 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಚಳಿ ಮತ್ತು ಮಳೆಯ ನಡುವೆಯೂ ಅವರ ಹೋರಾಟ ಮುಂದುವರಿದಿದ್ದು, ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸದಿರುವುದು ಖಂಡನೀಯ. ಮನೆಮನೆಗೆ ತೆರಳಿ ಹಗಲು-ರಾತ್ರಿ ಆರೋಗ್ಯ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಿದ್ಯಾರ್ಥಿಗಳ ಸಂಪೂರ್ಣ ಬೆಂಬಲವಿದೆ. ಸರ್ಕಾರ ಕೂಡಲೇ ಹಠಮಾರಿ ಧೋರಣೆ ಕೈಬಿಟ್ಟು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಎಐಡಿಎಸ್ಒ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರ ಹೋರಾಟದಲ್ಲಿ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದು, ಹೋರಾಟ ಯಶಸ್ವಿಯಾಗುವವರೆಗೂ ಸಂಘಟನೆ ಹಾಗೂ ವಿದ್ಯಾರ್ಥಿಗಳ ಬೆಂಬಲ ಮುಂದುವರಿಯಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಐಡಿಎಸ್ಒ ಸಂಘಟನಾಕಾರ ಕಿರಣ್ ಕುಮಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.