ಸಾಹಿತ್ಯವು ಬದುಕಿಗೆ ಸ್ಫೂರ್ತಿ ನೀಡುವ ಶಕ್ತಿ ಹೊಂದಿದೆ: ಪ್ರೊ. ನಿತ್ಯಾನಂದ ಶೆಟ್ಟಿ
ಲೋಕದರ್ಶನ ವರದಿ
ಬೆಳಗಾವಿ 15: ಕಲೆ ಮತ್ತು ಸಾಹಿತ್ಯಕ್ಕೆ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಶಕ್ತಿ ಇದೆ. ನಮ್ಮ ಭಾಷೆ, ನೆಲ, ನುಡಿ ಹಾಗೂ ಸಂಸ್ಕೃತಿ ನಮಗೆ ಆಭರಣವಿದ್ದಂತೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆದಾಗ ಮಾತ್ರ ಭಾಷೆಗೆ ನಿಜವಾದ ಶ್ರೇಯಸ್ಸು ದೊರೆಯುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಡಾ. ಡಿ.ವಿ.ಜಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಶೆಟ್ಟಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ 99ನೇ ಬೆಳಗಾವಿ ನಾಡಹಬ್ಬ ಉತ್ಸವದ ನಾಲ್ಕನೆಯ ದಿನದ ಕಾರ್ಯಕ್ರಮದಲ್ಲಿ ‘ "ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷಾ ಸಂವರ್ಧನೆ" ವಿಷಯದ ಕುರಿತು ಅವರು ಮಾತನಾಡಿದರು.
ಸಾಹಿತ್ಯ ಆಧಾರಿತ ಕಥೆಗಳು, ಚಲನಚಿತ್ರಗಳು ಹಾಗೂ ನಾಟಕಗಳು ಜನರ ಬದುಕಿಗೆ ಸ್ಫೂರ್ತಿ ನೀಡುತ್ತವೆ. ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಗೌರವವಿದ್ದು, ಅದನ್ನು ಮತ್ತಷ್ಟು ವಿಸ್ತರಿಸುವ ಕೆಲಸವಾಗಬೇಕು. ನಮ್ಮ ನಾಡಹಬ್ಬಗಳು ಕಾಲಕಾಲಕ್ಕೂ ವೈಭವದಿಂದ ರಾರಾಜಿಸಬೇಕು. ಸಾಹಿತ್ಯವು ಶ್ರೀಮಂತ ಭಾಷೆಯ ಜೀವಾಳವಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಹಿತ್ಯದ ಸ್ಪರ್ಶ ಇರಬೇಕು. ಸಾಹಿತ್ಯದ ಕೊರತೆಯಿಂದಾಗಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರವೂ ನೀರೀಕ್ಷಿತ ಯಶಸ್ಸು ಕಾಣದೆ ವಿಫಲವಾಗಿರುವ ಉದಾಹರಣೆ ಇದೆ. ಆದ್ದರಿಂದ ಕಲೆ, ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಹಿತ್ಯಕ್ಕೆ ಮಹತ್ವ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.