ಅಲ್ಯೂಮಿನಿಯಂ ಪಾತ್ರೆಗಳ ಗುಣಮಟ್ಟದ ಮಾನದಂಡಗಳನ್ನು ಕಠಿಣಗೊಳಿಸಿದ ಕೇಂದ್ರ; ಪಾನೀಯ ಕ್ಯಾನ್ಗಳಿಗೆ 2027ರ ಏಪ್ರಿಲ್ ಗಡುವು
ನವದೆಹಲಿ, ಅ. 15 (ಯುಎನ್ಐ): ಕೇಂದ್ರ ಸರ್ಕಾರವು ಅಲ್ಯೂಮಿನಿಯಂನಿಂದ ತಯಾರಿಸಿದ ಪಾತ್ರೆಗಳಿಗೆ ಕಡ್ಡಾಯ ಗುಣಮಟ್ಟದ ಪ್ರಮಾಣೀಕರಣವನ್ನು ತಕ್ಷಣದಿಂದಲೇ ಜಾರಿಗೆ ತಂದಿದ್ದು, ಅಲ್ಯೂಮಿನಿಯಂ ಪಾನೀಯ ಕ್ಯಾನ್ಗಳು ಭಾರತೀಯ ಮಾನಕಗಳ ಬ್ಯೂರೋ (ಬಿಐಎಸ್) ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಲು 2027ರ ಏಪ್ರಿಲ್ 1ರವರೆಗೆ ಗಡುವು ವಿಧಿಸಿದೆ. ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಹಂತ ಹಂತವಾಗಿ ಅನುಸರಣೆಗಾಗಿ ಹೆಚ್ಚುವರಿ ಸಮಯ ನೀಡಲಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ), ಈ ವರ್ಷದ ಆರಂಭದಲ್ಲಿ ಹೊರಡಿಸಲಾಗಿದ್ದ ಹಿಂದಿನ ಆದೇಶದ ಬದಲಿಗೆ, ಅಡುಗೆ ಪಾತ್ರೆಗಳು, ಗೃಹೋಪಯೋಗಿ ಪಾತ್ರೆಗಳು ಮತ್ತು ಆಹಾರ ಹಾಗೂ ಪಾನೀಯಗಳ ಕ್ಯಾನ್ಗಳ (ಗುಣಮಟ್ಟ ನಿಯಂತ್ರಣ) ಎರಡನೇ ಆದೇಶ, 2026 ಅನ್ನು ಅಧಿಸೂಚಿಸಿದೆ.
ಅಕ್ಟೋಬರ್ 13ರಂದು ಪ್ರಕಟಿಸಲಾದ ಪರಿಷ್ಕೃತ ನಿಯಮಗಳ ಪ್ರಕಾರ, ಅಲ್ಯೂಮಿನಿಯಂನಿಂದ ತಯಾರಿಸಿದ ಪಾತ್ರೆಗಳು ಭಾರತೀಯ ಮಾನಕ IS 1660:2024ಕ್ಕೆ ಹಾಗೂ ಅಲ್ಯೂಮಿನಿಯಂ ಪಾನೀಯ ಕ್ಯಾನ್ಗಳು IS 14407:2023ಕ್ಕೆ ಅನುಗುಣವಾಗಿರಬೇಕು. ಈ ಆದೇಶದ ವ್ಯಾಪ್ತಿಗೆ ಬರುವ ಉತ್ಪನ್ನಗಳ ಮೇಲೆ ಮಾನ್ಯ ಪರವಾನಗಿಯೊಂದಿಗೆ ನಿಗದಿತ ಬಿಐಎಸ್ ಮಾನಕ ಚಿಹ್ನೆ ಇರಬೇಕು.
ಅಲ್ಯೂಮಿನಿಯಂ ಪಾತ್ರೆಗಳಿಗೆ ಸಂಬಂಧಿಸಿದ ಪ್ರಮಾಣೀಕರಣ ನಿಯಮವು ಎಲ್ಲಾ ವರ್ಗದ ತಯಾರಕರಿಗೆ ತಕ್ಷಣದಿಂದಲೇ ಅನ್ವಯಿಸುತ್ತದೆ. ಆದರೆ, ಪಾನೀಯ ಕ್ಯಾನ್ಗಳ ತಯಾರಕರಿಗೆ ಮಾನದಂಡಗಳನ್ನು ಪಾಲಿಸಲು ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.
ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳನ್ನು ಹೊರತುಪಡಿಸಿದ ದೊಡ್ಡ ಹಾಗೂ ಇತರ ತಯಾರಕರು 2027ರ ಏಪ್ರಿಲ್ 1ರೊಳಗೆ ಪಾನೀಯ ಕ್ಯಾನ್ಗಳ ಮಾನದಂಡಗಳನ್ನು ಪಾಲಿಸಬೇಕು. ಸಣ್ಣ ಉದ್ಯಮಗಳಿಗೆ 2027ರ ಜುಲೈ 1ರವರೆಗೆ ಮತ್ತು ಅತಿ ಸಣ್ಣ ಉದ್ಯಮಗಳಿಗೆ 2027ರ ಅಕ್ಟೋಬರ್ 1ರವರೆಗೆ ಗಡುವು ನೀಡಲಾಗಿದೆ.
ಬಿಐಎಸ್ನೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಭಾರತೀಯ ಮಾನಕಗಳ ಬ್ಯೂರೋ ಕಾಯ್ದೆ, 2016ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯವೆಂದು ಸರ್ಕಾರ ತಿಳಿಸಿದೆ.
ಅನ್ವಯವಾಗುವ ಗಡುವಿಗಿಂತ ಮೊದಲು ತಯಾರಿಸಲಾದ ಅಥವಾ ಆಮದು ಮಾಡಿಕೊಂಡ ಸರಕುಗಳ ದಾಸ್ತಾನು ಹೊಂದಿರುವ ಅರ್ಹ ತಯಾರಕರು ಮತ್ತು ಆಮದುದಾರರಿಗೂ ಪರಿಷ್ಕೃತ ನಿಯಮಾವಳಿಯಲ್ಲಿ ವಿನಾಯಿತಿ ನೀಡಲಾಗಿದೆ. ಸಂಬಂಧಿತ ನಿಯಮ ಜಾರಿಗೆ ಬಂದ ದಿನಾಂಕದಿಂದ ಆರು ತಿಂಗಳವರೆಗೆ ಅವರು ತಮ್ಮಲ್ಲಿರುವ ಹಳೆಯ ದಾಸ್ತಾನನ್ನು ಮಾರಾಟ ಮಾಡಲು, ಪ್ರದರ್ಶಿಸಲು ಅಥವಾ ಮಾರಾಟಕ್ಕೆ ನೀಡಲು ಅವಕಾಶವಿದೆ. ಇದಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ನಿಂದ ಪ್ರಮಾಣೀಕರಿಸಲಾದ ಘೋಷಣೆಯನ್ನು ಬಿಐಎಸ್ಗೆ ಸಲ್ಲಿಸಬೇಕು.
ಈ ವಿನಾಯಿತಿಯ ಪ್ರಯೋಜನ ಪಡೆಯಲು ತಯಾರಕರು ಬಿಐಎಸ್ ಪ್ರಮಾಣೀಕರಣವನ್ನು ಹೊಂದಿರಬೇಕು ಅಥವಾ ಅದಕ್ಕಾಗಿ ಅರ್ಜಿ ಸಲ್ಲಿಸಿರಬೇಕು.
ದೇಶೀಯವಾಗಿ ತಯಾರಿಸಿ ರಫ್ತು ಮಾಡುವ ಉತ್ಪನ್ನಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಈಗಾಗಲೇ ಘನ, ದ್ರವ ಅಥವಾ ಅನಿಲ ಪದಾರ್ಥಗಳನ್ನು ತುಂಬಿರುವ ಆಮದು ಮಾಡಿದ ಕಂಟೇನರ್ಗಳಿಗೂ ಈ ನಿಯಮಗಳು ಅನ್ವಯಿಸುವುದಿಲ್ಲ.
ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಗಳಿಗಾಗಿ ಅಡುಗೆ ಪಾತ್ರೆಗಳು, ಗೃಹೋಪಯೋಗಿ ಪಾತ್ರೆಗಳು ಹಾಗೂ ಪಾನೀಯ ಕ್ಯಾನ್ಗಳ ತಯಾರಕರು ವರ್ಷಕ್ಕೆ ಗರಿಷ್ಠ 200 ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ಪ್ರತ್ಯೇಕ ವಿನಾಯಿತಿ ನೀಡಿದೆ. ಈ ಉತ್ಪನ್ನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಮಾರಾಟ ಮಾಡುವಂತಿಲ್ಲ ಮತ್ತು ಅವುಗಳನ್ನು ಸ್ಕ್ರ್ಯಾಪ್ ರೂಪದಲ್ಲಿ ವಿಲೇವಾರಿ ಮಾಡಬೇಕು. ಈ ವಿನಾಯಿತಿ ಪಡೆಯುವ ತಯಾರಕರು ಆಮದು ಮಾಡಿಕೊಂಡ ಉತ್ಪನ್ನಗಳ ವರ್ಷವಾರು ದಾಖಲೆಗಳನ್ನು ನಿರ್ವಹಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು.
ಬಿಐಎಸ್ ಅಧಿಸೂಚಿಸುವ ಸಂಬಂಧಿತ ಭಾರತೀಯ ಮಾನಕಗಳ ಇತ್ತೀಚಿನ ಆವೃತ್ತಿಗಳು ಹಾಗೂ ನಂತರದ ತಿದ್ದುಪಡಿಗಳು ಅಧಿಸೂಚನೆಯ ದಿನಾಂಕದಿಂದ ಅನ್ವಯವಾಗಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಿಐಎಸ್ ಪ್ರಮಾಣೀಕರಣ ಮತ್ತು ಜಾರಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಬಿಐಎಸ್ ಕಾಯ್ದೆ, 2016ರ ನಿಬಂಧನೆಗಳ ಅಡಿಯಲ್ಲಿ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ.
ಡಿಪಿಐಐಟಿಯ ಜಂಟಿ ಕಾರ್ಯದರ್ಶಿ ಸುಮೀತ್ ಕುಮಾರ್ ಜರಂಗಲ್ ಅವರು ಹೊರಡಿಸಿದ ಈ ಆದೇಶವು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ದಿನದಿಂದಲೇ ಜಾರಿಗೆ ಬಂದಿದೆ.