ಬೆಳಗಾವಿ

ಭೀಕರ ಅಪಘಾತ: ಕಂಟೇನರ್ ಚಕ್ರದಡಿ ಸಿಲುಕಿ ಪೊಲೀಸ್ ಪೇದೆ-ಮಗಳು ಇಬ್ಬರು ದುರ್ಮರಣ

ಭೀಕರ ಅಪಘಾತ: ಕಂಟೇನರ್ ಚಕ್ರದಡಿ ಸಿಲುಕಿ ಪೊಲೀಸ್ ಪೇದೆ-ಮಗಳು ಇಬ್ಬರು ದುರ್ಮರಣ

ಬೆಳಗಾವಿ : ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಿಪ್ಪಾನಿ ಬಳಿಯ ತವಂದಿ ಘಾಟ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಹಾಗೂ ಅವರ ಪುತ್ರಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ 14 ಸಂಜೆ 6.30ರ ವೇಳೆಗೆ ನಡೆದಿದೆ.

ಮೃತರನ್ನು ನಿಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ಕಾನ್‌ಸ್ಟೇಬಲ್ ಪುಂಡಲಿಕ ಆರ್. ಹಟ್ಟಿ (52) ಹಾಗೂ ಅವರ ಪುತ್ರಿ ನಿಖಿತಾ ಪುಂಡಲಿಕ ಹಟ್ಟಿ (24) ಎಂದು ಗುರುತಿಸಲಾಗಿದೆ. ಇವರು ನಿಪಾಣಿಯ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.

 ಸ್ಪೀಡ್ ಬ್ರೇಕರ್ ಬಳಿ ಸಂಭವಿಸಿದ ದುರ್ಘಟನೆ :

   ಮೂಲತಃ ಹುಕ್ಕೇರಿ ತಾಲೂಕಿನ ಉಳಗಡ್ಡಿ ಖಾನಾಪುರ ಗ್ರಾಮದವರಾದ ಪುಂಡಲಿಕ ಹಟ್ಟಿ ಅವರು ತಮ್ಮ ಪುತ್ರಿ ನಿಖಿತಾಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ಸ್ವಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ನಿಪಾಣಿಗೆ ಮರಳುತ್ತಿದ್ದಾಗ ತವಂದಿ ಘಾಟ್‌ನ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಬಳಿ ಅಪಘಾತ ಸಂಭವಿಸಿದೆ.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ದ್ವಿಚಕ್ರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಂದೆ-ಮಗಳು ರಸ್ತೆಗೆ ಬಿದ್ದಿದ್ದು, ಕಂಟೇನರ್‌ನ ಚಕ್ರಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ವಸತಿ ಗೃಹದಲ್ಲಿ ಶೋಕದ ಛಾಯೆ : 

    ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ನಿಪಾಣಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹಾಗೂ ಅವರ ಪುತ್ರಿ ಮೃತಪಟ್ಟಿರುವ ಸುದ್ದಿ ತಿಳಿದು ಸಹೋದ್ಯೋಗಿಗಳು ಮತ್ತು ಪರಿಚಿತರು ತೀವ್ರ ದುಃಖ ವ್ಯಕ್ತಪಡಿಸಿದರು. ನಿಪಾಣಿಯ ಪೊಲೀಸ್ ವಸತಿ ಗೃಹದ ಆವರಣದಲ್ಲಿಯೂ ಶೋಕದ ವಾತಾವರಣ ನಿರ್ಮಾಣವಾಯಿತು.

ಮೃತ ನಿಖಿತಾ ಅವರು ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಕೋರ್ಸ್ ಪೂರ್ಣಗೊಳಿಸುವ ಹಂತದಲ್ಲಿದ್ದರು ಎಂದು ತಿಳಿದುಬಂದಿದೆ.

 ಕುಟುಂಬಕ್ಕೆ ಆಘಾತ : 

ಒಂದೇ ಅಪಘಾತದಲ್ಲಿ ತಂದೆ-ಮಗಳು ಇಬ್ಬರೂ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ತೀವ್ರ ದುಃಖ ಮೂಡಿಸಿದೆ. ಮೃತ ಪುಂಡಲಿಕ ಹಟ್ಟಿ ಅವರು ಪತ್ನಿ ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.

ಕುಟುಂಬದ ಇಬ್ಬರು ಸದಸ್ಯರನ್ನು ಏಕಕಾಲದಲ್ಲಿ ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರಂತದಿಂದ ಪೊಲೀಸ್ ವಲಯದಲ್ಲಿಯೂ ಶೋಕ ಆವರಿಸಿದೆ.

ಸುದ್ದಿ ಓದಿ