99ನೇ ಬೆಳಗಾವಿ ನಾಡಹಬ್ಬದ ಮೂರನೇ ದಿನ ‘ಸಬಲೀಕರಣದ ಹಾದಿಯಲ್ಲಿ ಮಹಿಳಾ ಆರಕ್ಷಣೆ’ ಕಾರ್ಯಕ್ರಮ
ಬೆಳಗಾವಿ 14: ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯವಾಗುತ್ತದೆ. ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ, ತರಬೇತಿ ಹಾಗೂ ಅವಕಾಶಗಳನ್ನು ಕಲ್ಪಿಸಿದರೆ ಕುಟುಂಬದ ರಕ್ಷಣೆಯ ಜೊತೆಗೆ ಸಮಾಜದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಬಲ್ಲರು ಎಂದು ಕಾರಂಜಿಮಠದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ನಡೆದ 99ನೇ ಬೆಳಗಾವಿ ನಾಡಹಬ್ಬದ ಮೂರನೇ ದಿನದ ಕಾರ್ಯಕ್ರಮದಲ್ಲಿ ‘ಸಬಲೀಕರಣದ ಹಾದಿಯಲ್ಲಿ ಮಹಿಳಾ ಆರಕ್ಷಣೆ’ ವಿಷಯದ ಕುರಿತು ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವಾದಿ ಶರಣರ ಕಾಲದಲ್ಲಿ ಮಹಿಳೆಯರ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ಹಕ್ಕುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣೆಯರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ಸಾರಿದ್ದಾರೆ. ಮಹಿಳೆಯರೂ ಪುರುಷರಂತೆ ಧಾರ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಮೂಲಕ ಶರಣರ ಚಳವಳಿ ಸಮಾನತೆಯ ಸಂದೇಶವನ್ನು ಸಾರಿದೆ ಎಂದರು. ಮಹಿಳೆಯರು ವಿವಿಧ ತರಬೇತಿಗಳನ್ನು ಪಡೆದು ಉದ್ಯೋಗ, ಸಹಕಾರ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಓದ್ಯಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಹೆಣ್ಣು ಎಂಬ ಕಾರಣಕ್ಕೆ ಕೀಳಾಗಿ ಕಾಣುವ ಮನೋಭಾವವನ್ನು ತೊರೆದು, ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಮಹಿಳೆಯರು ಅಭಿವೃದ್ಧಿ ಹೊಂದಿದಾಗ ನಾಡು ಸಮೃದ್ಧಿಯಾಗುವುದರೊಂದಿಗೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಗುರುದೇವಿ ಹುಲ್ಲೆಪ್ಪನವಠ ಮಾತನಾಡಿ, ಮನುಕುಲದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನವು ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಸ್ಥಾನಮಾನ ಕಲ್ಪಿಸಿದ್ದು, ಅವರ ರಕ್ಷಣೆಗಾಗಿ ಹಲವು ಕಾನೂನುಗಳಿವೆ. ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳನ್ನು ಉಲ್ಲಂಘಿಸಿ ದೌರ್ಜನ್ಯ ಎಸಗುತ್ತಿರುವುದು ವಿಷಾದನೀಯ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮಹಿಳೆಯರು ಮಧ್ಯರಾತ್ರಿಯಲ್ಲಿಯೂ ನಿರ್ಭೀತಿಯಿಂದ ಮನೆ ತಲುಪುವ ಪರಿಸ್ಥಿತಿ ನಿರ್ಮಾಣವಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆತಂತಾಗುತ್ತದೆ. ಮಹಿಳೆಯರನ್ನು ಕೀಳಾಗಿ ಕಾಣುವ ಮನೋಭಾವ ಬದಲಾದಾಗ ಮಾತ್ರ ಸಮಾಜದಲ್ಲಿ ಸುರಕ್ಷತೆ ಮತ್ತು ಸಮಾನತೆ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕ ಸಿ.ಬಿ. ಅರಿಕೇರಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ಸಮಾಜವನ್ನು ಮುನ್ನಡೆಸುವ ಶಕ್ತಿಯೂ ಮಹಿಳೆಯರಲ್ಲಿದೆ. ‘ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು’ ಎಂಬ ಮಾತಿನಂತೆ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರ ಪ್ರೋತ್ಸಾಹ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರವಿ ಕಲಾ ಮಂದಿರ ನೃತ್ಯಾಲಯದ ವತಿಯಿಂದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕೆಎಲ್ಇ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ, ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಆರ್.ಪಿ. ಪಾಟೀಲ, ಕಾರ್ಯದರ್ಶಿ ಸಿ.ಕೆ. ಜೋರಾಪುರ ಸ್ವಾಗತಿಸಿದರು. ಡಾ.ಬಸವರಾಜ ಜಗಜಂಪಿ, ಡಾ. ಎಚ್.ಬಿ. ತಿಮ್ಮಾಪೂರ, ಸೋಮಶೇಖರ ಮಾವಿನಕಟ್ಟಿ, ಜ್ಯೋತಿ ಬದಾಮಿ, ಶ್ರೀರಂಗ ಜೋಶಿ, ಮಹಾಂತೇಶ ಕಂಠಿ, ಡಾ. ಟಿ.ಜಿ. ಸಾಂಬ್ರೇಕರ್, ಶೋಭಾ ಮೂಕಾಶಿ, ದಾನಮ್ಮ ಅಂಗಡಿ ನಿರೂಪಿಸಿದರು. ವ್ಹಿ.ಕೆ. ಪಾಟೀಲ ವಂದಿಸಿದರು.