ಕೋಟಿಹಾಳ ಗ್ರಾಮದ ದಲಿತ ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಮನವಿ
ರಾಣೇಬೆನ್ನೂರು 14: ತಾಲ್ಲೂಕಿನ ಕೋಟಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಸುಮಾರು 500ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಅನೇಕ ಬಡ ಕುಟುಂಬಗಳು ಸ್ವಂತ ನಿವೇಶನ ಹಾಗೂ ಸಮರ್ಕ ವಸತಿ ಸೌಲಭ್ಯವಿಲ್ಲದೆ ಸಂಕಷ್ಟದಲ್ಲಿವೆ. ಕೂಡಲೆ ಸರ್ಕಾರ ಇತ್ತ ಗಮನಹರಿಸಿ ವಸತಿಯನ್ನು ನೀಡಲು ಮುಂದಾಗ ಬೇಕೆಂದು ಹಾವೇರಿ ಜಿಲ್ಲಾ ಅಧ್ಯಕ್ಷ ಸಂತೋಷ್ ಹಳದಾಳ ಆಗ್ರಹಿಸಿದರು.
ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟಿಹಾಳ ಗ್ರಾಮದಲ್ಲಿ ನಿವೇಶನ ರಹಿತ ಪರಿಶಿಷ್ಟ ಜಾತಿ ಕುಟುಂಬಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, ಸಾಮಾಜಿಕ ತಾರತಮ್ಯವೂ ಮುಂದುವರಿದಿದೆ. ಗ್ರಾಮದ ಕೆಲವು ಅಂಗಡಿಗಳಲ್ಲಿ ದಲಿತರಿಗೆ ಪ್ರತ್ಯೇಕ ಪಾತ್ರೆಯಲ್ಲಿ ಕುಡಿಯುವ ನೀರು ನೀಡುವಂತಹ ಅಸ್ಪೃಶ್ಯತೆಯ ಆಚರಣೆಗಳು ಇನ್ನೂ ನಡೆಯುತ್ತಿವೆ. ಇದರಿಂದಾಗಿ ದಲಿತ ಕುಟುಂಬಗಳು ಗೌರವಯುತ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದು, ಸೂಕ್ತ ಬಾಡಿಗೆ ಮನೆಗಳು ದೊರೆಯದ ಕಾರಣ ಒಂದೇ ಮನೆಯಲ್ಲಿ ವ್ಘಿಳ್ದಹ್ಕ್ಧ್ಘ್ದಿ ಕುಟುಂಬಗಳು ವಾಸಿಸುವ ಪರಿಸ್ಥಿತಿಯೂ ಇದೆ ಎಂದರು.
ರಾಣೇಬೆನ್ನೂರು ತಾಲೂಕು ಅಧ್ಯಕ್ಷ ಮಲ್ಲೇಶ್ ಸಿ.ಬಿ. ಮಾತನಾಡಿ, ಗ್ರಾಮದ ಕೆಲವು ಕುಟುಂಬಗಳು ಬೇರೆ ಊರುಗಳಿಗೆ ವಲಸೆ ಹೋಗುವಂತಾಗಿದ್ದು, ಮಕ್ಕಳ ಶಿಕ್ಷಣ ಹಾಗೂ ಕುಟುಂಬಗಳ ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತಿದೆ. ಕೋಟಿಹಾಳ ಗ್ರಾಮದ ನಿವೇಶನ ರಹಿತ ಪರಿಶಿಷ್ಟ ಜಾತಿ ಕುಟುಂಬಗಳ ಸಮಗ್ರ ಸಮೀಕ್ಷೆ ನಡೆಸಬೇಕು. ನಿವೇಶನಕ್ಕಾಗಿ ಲಭ್ಯವಿರುವ ಸರ್ಕಾರಿ ಹಾಗೂ ಗ್ರಾಮ ಪಂಚಾಯಿತಿ ಜಮೀನುಗಳ ವಿಸ್ತೀರ್ಣ ಮತ್ತು ಕಾನೂನುಬದ್ಧ ಸ್ಥಿತಿಯನ್ನು ಪರೀಶೀಲಿಸಬೇಕು. ಅರ್ಹ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ನಿವೇಶನ ಮಂಜೂರು ಮಾಡಬೇಕು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಸರ್ವೆ ನಂ.26ರ ಜಮೀನು ಪರೀಶೀಲನೆಗೆ ಒತ್ತಾಯ: ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಟಪಳ್ಳಿ ಗ್ರಾಮದ ಸರ್ವೆ ನಂ.26ರ ಖಾಲಿ ಸರ್ಕಾರಿ ಜಮೀನಿನ ದಾಖಲೆಗಳನ್ನು ಪರೀಶೀಲಿಸಿ, ಕೋಟಿಹಾಳ ಗ್ರಾಮದ ಅರ್ಹ ಹಾಗೂ ನಿವೇಶನ ರಹಿತ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸಿ, ನಿಯಮಾನುಸಾರ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರಮೇಶ್, ಆಂಜನೇಯ, ಸುರೇಶ್, ನಾಗರಾಜ್ ಸೇರಿದಂತೆ ಗುತ್ಯಮ್ಮ, ಗಂಗಮ್ಮ, ಗಿರಿಜಮ್ಮ, ಮಮತ, ಚೌಡಮ್ಮ ಹಾಗೂ ಇತರರು ಉಪಸ್ಥಿತರಿದ್ದರು.