ವ್ಯಾಪಾರ

ಪುಣೆಯಲ್ಲಿ ಎಲೆಕ್ಟ್ರಿಕ್ ಟ್ರಕ್ ಉತ್ಪಾದನಾ ಘಟಕ ಉದ್ಘಾಟಿಸಲಿರುವ ಸಿಎಂ ಫಡ್ನವೀಸ್

ಪುಣೆಯಲ್ಲಿ ಎಲೆಕ್ಟ್ರಿಕ್ ಟ್ರಕ್ ಉತ್ಪಾದನಾ ಘಟಕ ಉದ್ಘಾಟಿಸಲಿರುವ ಸಿಎಂ ಫಡ್ನವೀಸ್

ಪುಣೆ, ಅ. 14 : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಬುಧವಾರ ಪುಣೆ ಜಿಲ್ಲೆಯ ಮಾವಲ್ ತಾಲ್ಲೂಕಿನ ಅಂಬಿ ಪ್ರದೇಶದಲ್ಲಿರುವ ಆರ್‌ಎಂಕೆ ಇಂಡಸ್ಟ್ರಿಯಲ್ ಪಾರ್ಕ್ 3ರಲ್ಲಿ ಎನರ್ಜಿ ಇನ್ ಮೋಷನ್ (ಇಐಎಂ) ಸಂಸ್ಥೆಯ ಎಲೆಕ್ಟ್ರಿಕ್ ಟ್ರಕ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಪುಣೆ ಜಿಲ್ಲಾ ಉಸ್ತುವಾರಿ ಸಚಿವೆ ಸುನೇತ್ರಾ ಪವಾರ್ ಮತ್ತು ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಆರ್‌ಎಂಕೆ ಸ್ಪೇಸಸ್‌ನ ವ್ಯವಸ್ಥಾಪಕ ನಿರ್ದೇಶಕ ರಂಜಿತ್ ರಾಮದಾಸ್ ಕಾಕಡೆ ಅವರು ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ.

ಎನರ್ಜಿ ಇನ್ ಮೋಷನ್ ಸಂಸ್ಥೆಯು ಭಾರೀ ಸರಕು ಸಾಗಣೆಗೆ ಅಗತ್ಯವಾದ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಟ್ರಕ್‌ಗಳನ್ನು ತಯಾರಿಸುತ್ತದೆ. ಸಂಸ್ಥೆಯ 55 ಟನ್ ಸಾಮರ್ಥ್ಯದ ‘ಅಶ್ವ’ ಎಲೆಕ್ಟ್ರಿಕ್ ಟ್ರಕ್‌ನಲ್ಲಿ ಬ್ಯಾಟರಿ ಬದಲಾವಣೆ ತಂತ್ರಜ್ಞಾನವನ್ನು ಬಳಸಲಾಗಿದ್ದು, ಖಾಲಿಯಾದ ಬ್ಯಾಟರಿಯನ್ನು ಸುಮಾರು ಏಳು ನಿಮಿಷಗಳಲ್ಲಿ ಬದಲಾಯಿಸಬಹುದು.

ಈ ತಂತ್ರಜ್ಞಾನದಿಂದ ಕಾರ್ಯಾಚರಣೆಯಲ್ಲಿನ ವಿಳಂಬವನ್ನು ಕಡಿಮೆ ಮಾಡುವುದರ ಜೊತೆಗೆ ಡೀಸೆಲ್ ಬಳಕೆ ಮತ್ತು ಮಾಲಿನ್ಯವನ್ನು ತಗ್ಗಿಸಲು ಸಾಧ್ಯವಾಗಲಿದೆ.

ಕಂಪನಿಯು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರಕ್ಕೆ (ಜೆಎನ್‌ಪಿಎ) ಎಲೆಕ್ಟ್ರಿಕ್ ಟ್ರಕ್‌ಗಳನ್ನು ಪೂರೈಸುತ್ತಿದೆ. ಮುಂಬೈ-ಪುಣೆ ಕಾರಿಡಾರ್‌ನಲ್ಲಿ ಈ ಟ್ರಕ್‌ಗಳ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ.

ಆರ್‌ಎಂಕೆ ಗ್ರೂಪ್‌ನ ಅಧ್ಯಕ್ಷ ರಾಮದಾಸ್ ಕಾಕಡೆ ಅವರ ಪ್ರಕಾರ, ಈ ವರ್ಷ ಮಾವಲ್ ತಾಲ್ಲೂಕಿನಲ್ಲಿ ಒಟ್ಟು 2,500 ಕೋಟಿ ರೂ. ಹೂಡಿಕೆಗೆ ಸಮೂಹವು ನೆರವು ನೀಡಿದ್ದು, ಇದರಿಂದ 4,000 ನೇರ ಉದ್ಯೋಗಗಳು ಸೃಷ್ಟಿಯಾಗಿವೆ.

ಎನರ್ಜಿ ಇನ್ ಮೋಷನ್, ವಿಸ್ಟಿಯಾನ್, ಎನ್‌ಡಿಎಸ್, ಪಿಟಿಎಲ್, ಅಮೇಯಾ ಫಿನಿಶಿಂಗ್ ಸೊಲ್ಯೂಷನ್ಸ್, ರೆವೊಲ್ಟೆಕ್, ಕೆ-ನೆಸ್ಟ್, ಡಬ್ಲ್ಯು ಆ್ಯಂಡ್ ಡಿ, ಬೋರ್‌ಟೆಕ್ ಮತ್ತು ಮನ್ ಹಮ್ಮೆಲ್ ಸೇರಿದಂತೆ ಹಲವು ಕಂಪನಿಗಳು ಈ ಹೂಡಿಕೆಗಳಲ್ಲಿ ಪಾಲ್ಗೊಂಡಿವೆ.

ಕಳೆದ ಏಳು ವರ್ಷಗಳಲ್ಲಿ ಮಾವಲ್ ತಾಲ್ಲೂಕಿನಲ್ಲಿ 10,000 ಕೋಟಿ ರೂ.ಗೂ ಅಧಿಕ ಹೂಡಿಕೆಗೆ ಆರ್‌ಎಂಕೆ ಸಮೂಹ ನೆರವು ನೀಡಿದ್ದು, 10,000ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇದೇ ಅವಧಿಯಲ್ಲಿ ಸಮೂಹವು 15,000ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದು, ಕೈಗಾರಿಕಾ ಘಟಕಗಳಿಗೆ ವಿದ್ಯುತ್ ಪೂರೈಸಲು ಒಟ್ಟು 11.2 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿ ಓದಿ