ವ್ಯಾಪಾರ

ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿ: ಪಿಯೂಷ್ ಗೋಯಲ್

ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿ: ಪಿಯೂಷ್ ಗೋಯಲ್

ನವದೆಹಲಿ, ನ. 27  — ಭಾರತ ಮತ್ತು ಅಮೆರಿಕ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮ ಹಂತ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದರು. ಒಪ್ಪಂದವನ್ನು ಅಂತಿಮಗೊಳಿಸಲು ಅಗತ್ಯವಿರುವ ಕ್ರಮಗಳ ಬಗ್ಗೆ ಉಭಯ ದೇಶಗಳು ಪ್ರಗತಿ ಸಾಧಿಸಿವೆ ಎಂದು ಅವರು ತಿಳಿಸಿದರು.

‘ಇಂಡಿಯಾ ಡೆಟ್ ಕ್ಯಾಪಿಟಲ್ ಮಾರ್ಕೆಟ್ ಶೃಂಗಸಭೆ 2026’ರಲ್ಲಿ ಆನ್‌ಲೈನ್ ಮೂಲಕ ಮಾತನಾಡಿದ ಗೋಯಲ್, ‘ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ. ಈ ಹಿಂದೆ ಒಪ್ಪಂದಕ್ಕೆ ಅಡ್ಡಿಯಾಗಿದ್ದ ಪ್ರಕ್ರಿಯೆ ಈಗ ರೂಪ ಪಡೆಯುತ್ತಿದೆ’ ಎಂದರು.

ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಲು ಅಮೆರಿಕದ ವ್ಯಾಪಾರ ಪ್ರತಿನಿಧಿ ಪ್ರಸ್ತಾಪಿಸಿರುವ ಬೆನ್ನಲ್ಲೇ ಗೋಯಲ್ ಈ ಹೇಳಿಕೆ ನೀಡಿದ್ದಾರೆ. ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಬಂದರೆ ಈ ಸುಂಕವನ್ನು ಶೇ. 17ಕ್ಕೆ ಇಳಿಸುವ ಸಾಧ್ಯತೆಯಿದೆ.

ಬಾಂಗ್ಲಾದೇಶ, ವಿಯೆಟ್ನಾಂ, ಪಾಕಿಸ್ತಾನ, ಇಂಡೋನೇಷ್ಯಾ, ಥಾಯ್ಲೆಂಡ್ ಮತ್ತು ಚೀನಾದಂತಹ ಸ್ಪರ್ಧಿ ಉತ್ಪಾದಕ ದೇಶಗಳಿಗೆ ಹೋಲಿಸಿದರೆ ಭಾರತದ ಸರಕುಗಳಿಗೆ ಅನುಕೂಲಕರ ಸುಂಕ ದರ ಸಿಗಬೇಕು ಎಂಬುದು ಭಾರತದ ನಿಲುವಾಗಿದೆ. ಸುಂಕ ಇಳಿಕೆ ಮತ್ತು ಉತ್ತಮ ಮಾರುಕಟ್ಟೆ ಪ್ರವೇಶದಿಂದ ಭಾರತೀಯ ರಫ್ತುದಾರರು ಅಮೆರಿಕದಲ್ಲಿ ಸ್ಪರ್ಧಾತ್ಮಕ ಬೆಲೆಗೆ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ.

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಈ ವರ್ಷದ ಅಂತ್ಯದೊಳಗೆ ಸಹಿ ಬೀಳಬಹುದು. ಅದು 2027ರ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದೂ ಗೋಯಲ್ ಹೇಳಿದರು.

ಮೊದಲ ತ್ರೈಮಾಸಿಕದಲ್ಲಿ ಭಾರತ ಶೇ. 7.8ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿದೆ ಎಂದು ಉಲ್ಲೇಖಿಸಿದ ಗೋಯಲ್, ತೈಲ ಬೆಲೆ ಏರಿಕೆ, ಸುಂಕದ ಅನಿಶ್ಚಿತತೆ ಮತ್ತು ಜಾಗತಿಕ ಸಮುದ್ರ ಸರಕು ಸಾಗಣೆಯಲ್ಲಿನ ಅಡಚಣೆಗಳ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವೆಗಳ ಒಟ್ಟು ರಫ್ತನ್ನು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿಸುವ ಗುರಿಯತ್ತ ಭಾರತ ಸಾಗುತ್ತಿದೆ ಎಂದರು.

ಸುದ್ದಿ ಓದಿ