ಕರ್ನಾಟಕದಲ್ಲಿ ಉತ್ಪಾದನೆ ವಿಸ್ತರಿಸಲು ಟೊಯೊಟಾಗೆ ಶಿವಕುಮಾರ್ ಆಹ್ವಾನ
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಮೊಟೊಮಾಚಿಯ ಟೊಯೊಟಾ ಘಟಕಕ್ಕೆ ಭೇಟಿ ನೀಡಿದ ಶಿವಕುಮಾರ್, ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕರ್ನಾಟಕದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು, ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸುವುದು ಹಾಗೂ ಹೊಸ ಸಾರಿಗೆ ಆಯ್ಕೆಗಳನ್ನು ಪರಿಚಯಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರ ಅಗತ್ಯ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿ, ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಟೊಯೊಟಾ ಪ್ರತಿನಿಧಿಗಳಿಗೆ ಆಹ್ವಾನ ನೀಡಿದರು. ಕಂಪನಿಯು ಕರ್ನಾಟಕದಲ್ಲಿನ ತನ್ನ ಪ್ರಸ್ತುತ ಕಾರ್ಯಾಚರಣೆಗಳ ಕುರಿತು ಮಾಹಿತಿ ನೀಡಿದ್ದು, ಉತ್ಪಾದನೆ ಮತ್ತು ರಫ್ತಿನಲ್ಲಿ ರಾಜ್ಯದ ಪಾತ್ರವನ್ನು ಒತ್ತಿಹೇಳಿತು. ವಾಹನ ಉತ್ಪಾದನಾ ಸಾಮರ್ಥ್ಯವನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ.
ಟ್ಯಾಕ್ಸಿ ಸೇವೆಗಾಗಿಯೇ ವಿನ್ಯಾಸಗೊಳಿಸಿರುವ ಹೈಬ್ರಿಡ್ ಮಾದರಿಯಿಂದ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸಲು ನೆರವಾಗಬಹುದು ಎಂದು ಶಿವಕುಮಾರ್ ಹೇಳಿದರು. ಪರ್ಯಾಯ ಇಂಧನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಫ್ಲೆಕ್ಸ್–ಫ್ಯುಯೆಲ್ ವಾಹನಗಳನ್ನು ಪರಿಚಯಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯಿತು.
ಸಭೆಯ ಬಳಿಕ ಶಿವಕುಮಾರ್ ಮತ್ತು ಪಾಟೀಲ್ ಅವರು 1959ರಲ್ಲಿ ಆರಂಭವಾದ ಮೊಟೊಮಾಚಿ ವಾಹನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು. ಈ ಘಟಕದಲ್ಲಿ ಹೈಬ್ರಿಡ್, ಬ್ಯಾಟರಿ ಚಾಲಿತ ವಿದ್ಯುತ್ ಮತ್ತು ಇಂಧನ ಕೋಶ ಚಾಲಿತ ವಿದ್ಯುತ್ ವಾಹನಗಳನ್ನು ಜೋಡಿಸಲಾಗುತ್ತದೆ. ಕಂಪನಿಯ ಉತ್ಪಾದನಾ ವಿಧಾನಗಳು ಮತ್ತು ವಾಹನ ತಂತ್ರಜ್ಞಾನಗಳನ್ನು ಪರಿಚಯಿಸುವ ಟೊಯೊಟಾ ಕೈಕಾನ್ ವಸ್ತುಸಂಗ್ರಹಾಲಯಕ್ಕೂ ಸಚಿವರು ಭೇಟಿ ನೀಡಿದರು.
ಟೊಯೊಟಾದ ‘ಗ್ಲೋಬಲ್ ಸ್ಕಿಲ್–ಅಪ್’ ಕಾರ್ಯಕ್ರಮದಡಿ ಜಪಾನ್ನಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಕರ್ನಾಟಕದ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) 20ಕ್ಕೂ ಹೆಚ್ಚು ಪದವೀಧರರೊಂದಿಗೆ ಸಚಿವರು ಸಂವಾದ ನಡೆಸಿದರು. ತರಬೇತಿಯ ಅನುಭವದ ಬಗ್ಗೆ ವಿಚಾರಿಸಿದ ಅವರು, ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಹೊಸ ಹೂಡಿಕೆ ಆಕರ್ಷಿಸುವುದು, ಉತ್ಪಾದನಾ ಸಾಮರ್ಥ್ಯ ವಿಸ್ತರಿಸುವುದು ಮತ್ತು ಕೌಶಲ್ಯಾಧಾರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ಅಂತರರಾಷ್ಟ್ರೀಯ ಹೂಡಿಕೆ ಅಭಿಯಾನದ ಭಾಗವಾಗಿ ಈ ಭೇಟಿ ನಡೆಯಿತು.