2027ರ ಚುನಾವಣೆ ಹಿನ್ನೆಲೆ ಉತ್ತರಾಖಂಡ ಬಿಜೆಪಿ ಕಾರ್ಯಕರ್ತರಿಗೆ ರಾಜನಾಥ್ ಸಿಂಗ್ರ 9 ಮಂತ್ರಗಳು
ಬಿಜೆಪಿ ರಾಜ್ಯ ವಿಸ್ತೃತ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯ ಹೆಚ್ಚಿಸಬೇಕು, ಯುವ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ಸಂಸದರು, ಶಾಸಕರು, ಸಚಿವರು ಮತ್ತು ಇತರ ಜನಪ್ರತಿನಿಧಿಗಳು ಜಿಲ್ಲೆ, ಮಂಡಲ ಮತ್ತು ಬೂತ್ ಮಟ್ಟದ ಸಭೆಗಳು ಹಾಗೂ ಜನಸಂವಾದಗಳ ಮೂಲಕ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸಿಂಗ್ ಸಲಹೆ ನೀಡಿದರು. ಜನಪ್ರತಿನಿಧಿಗಳು ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ವಿಪತ್ತು, ಅಪಘಾತ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಕಾರ್ಯಕರ್ತರು ನೆರವಿಗೆ ಧಾವಿಸಬೇಕು ಎಂದು ಅವರು ಹೇಳಿದರು.
ಪಕ್ಷದ ಕೆಲಸಗಳನ್ನು ಜನರಿಗೆ ತಿಳಿಸುವುದರ ಜೊತೆಗೆ, ಅವರ ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು ಅರಿಯಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಬೇಕು ಎಂದು ಸಿಂಗ್ ಹೇಳಿದರು. ಸಾರ್ವಜನಿಕ ಹೇಳಿಕೆಗಳು ವಿಷಯಾಧಾರಿತವಾಗಿರಬೇಕು. ವೈಯಕ್ತಿಕ ಟೀಕೆಗಳನ್ನು ತಪ್ಪಿಸಿ ರಾಜಕೀಯ ಸಭ್ಯತೆಯನ್ನು ಕಾಪಾಡಬೇಕು ಎಂದು ಸೂಚಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಕ್ರಿಯ ಯುವ ಕಾರ್ಯಕರ್ತರ ತಂಡ ರಚಿಸಿ, ಅವರಿಗೆ ಜನಸೇವೆಯ ತರಬೇತಿ ಮತ್ತು ನಾಯಕತ್ವದ ಅವಕಾಶ ನೀಡಬೇಕು ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ಮತ್ತು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಪ್ರತಿಪಕ್ಷಗಳು ಮಾಡುವ ಆರೋಪಗಳಿಗೆ ಸಿದ್ಧತೆಯೊಂದಿಗೆ ವಾಸ್ತವಾಂಶಗಳ ಆಧಾರದ ಮೇಲೆ ಉತ್ತರಿಸಬೇಕು ಎಂದು ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಸಿಂಗ್ ಹೇಳಿದರು. ಸರ್ಕಾರಿ ಯೋಜನೆಗಳಿಂದ ಜನರಿಗೆ ದೊರೆತ ಪ್ರಯೋಜನಗಳನ್ನು ಫಲಾನುಭವಿಗಳ ಅನುಭವಗಳ ಮೂಲಕ ವಿವರಿಸುವಂತೆ ಅವರು ತಿಳಿಸಿದರು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ಸಭ್ಯತೆಯನ್ನು ಕಾಪಾಡಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಪಕ್ಷದ ಒಗ್ಗಟ್ಟಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಧಾಮಿ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಿಂಗ್, ಉತ್ತರಾಖಂಡವು ಹಲವು ಅಭಿವೃದ್ಧಿ ಸೂಚಕಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಜಾರಿಗೆ ತಂದ ಹಲವು ಕಾನೂನುಗಳನ್ನೂ ಅವರು ಪ್ರಶಂಸಿಸಿದರು.