ಜಿಪ್ಮರ್‌ನಲ್ಲಿ 19 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಅಂಗದಾನದಿಂದ ನಾಲ್ವರಿಗೆ ಹೊಸ ಬದುಕು
ಚೆನ್ನೈ, ನ. 23 : ರಸ್ತೆ ಅಪಘಾತದ ಬಳಿಕ ಮೆದುಳು ಮೃತ ಸ್ಥಿತಿಗೆ ತಲುಪಿದ ತಿರುನೆಲ್ವೇಲಿ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ದೇವನ್ (19) ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಕಸಿಯಿಂದ ನಾಲ್ವರು ರೋಗಿಗಳಿಗೆ ಹೊಸ ಬದುಕು ದೊರೆತಿದೆ ಎಂದು ಜಿಪ್ಮರ್ ತಿಳಿಸಿದೆ. ದೇವನ್ ಅವರ ಎರಡೂ ಕಾರ್ನಿಯಾಗಳ ದಾನದಿಂದ ಇನ್ನಿಬ್ಬರಿಗೆ ದೃಷ್ಟಿ ಮರಳುವ ನಿರೀಕ್ಷೆಯಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಕಿಳಿರುಪ್ಪು ಗ್ರಾಮದ ದೇವನ್ ನವೆಂಬರ್ 9ರಂದು ರಸ್ತೆ ಅಪಘಾತಕ್ಕೀಡಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಪುದುಚೇರಿಯ ಜಿಪ್ಮರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇವನ್ ಅವರ ಮೆದುಳು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ ಬಳಿಕ ಕುಟುಂಬಸ್ಥರು ಅಂಗದಾನಕ್ಕೆ ಒಪ್ಪಿಗೆ ನೀಡಿದರು.
ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಜಿಪ್ಮರ್, ಕಷ್ಟದ ಸಮಯದಲ್ಲೂ ಅಂಗದಾನಕ್ಕೆ ಮುಂದಾದ ದೇವನ್ ಅವರ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದೆ. ಅಂಗದಾನ ಮತ್ತು ಕಸಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವೈದ್ಯಕೀಯ ತಂಡಗಳು, ಕಸಿ ಸಂಯೋಜಕರು, ದಾದಿಯರು, ತಂತ್ರಜ್ಞರು ಹಾಗೂ ಸಹಾಯಕ ಸಿಬ್ಬಂದಿಯ ಕಾರ್ಯವನ್ನೂ ಸಂಸ್ಥೆ ಶ್ಲಾಘಿಸಿದೆ.
ಒಬ್ಬ ದಾನಿಯಿಂದಲೇ ಅಂಗಾಂಗ ಕಸಿಗಾಗಿ ಕಾಯುತ್ತಿರುವ ಹಲವು ರೋಗಿಗಳಿಗೆ ನೆರವಾಗಬಹುದು. ಮರಣಾನಂತರದ ಅಂಗದಾನದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವನ್ನು ದೇವನ್ ಅವರ ಅಂಗದಾನ ಎತ್ತಿ ತೋರಿಸಿದೆ ಎಂದು ಜಿಪ್ಮರ್ ತಿಳಿಸಿದೆ.