ಬಜೆಟ್ ಪೂರ್ವ 10ನೇ ಸಮಾಲೋಚನಾ ಸಭೆ: ಆರೋಗ್ಯ, ಸಾಮಾಜಿಕ ವಲಯದ ತಜ್ಞರೊಂದಿಗೆ ನಿರ್ಮಲಾ ಸೀತಾರಾಮನ್ ಚರ್ಚೆ
ನವದೆಹಲಿ, ನ. 23 : 2027–28ನೇ ಸಾಲಿನ ಕೇಂದ್ರ ಬಜೆಟ್ ಸಿದ್ಧತೆಯ ಭಾಗವಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ 10ನೇ ಬಜೆಟ್ ಪೂರ್ವ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಮತ್ತು ಸಾಮಾಜಿಕ ವಲಯಗಳ ತಜ್ಞರು ಹಾಗೂ ಸಂಬಂಧಿತ ಪ್ರತಿನಿಧಿಗಳಿಂದ ಸಲಹೆಗಳನ್ನು ಪಡೆದರು.
ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರದ ವೆಚ್ಚ ಮತ್ತು ನೀತಿ ಆದ್ಯತೆಗಳನ್ನು ರೂಪಿಸಲು ಸಲಹೆ ಸಂಗ್ರಹಿಸುವುದು ಸಭೆಯ ಉದ್ದೇಶವಾಗಿತ್ತು. ಆರೋಗ್ಯ ಸೇವಾ ವ್ಯವಸ್ಥೆಯನ್ನು ಬಲಪಡಿಸುವುದು, ಅಗತ್ಯ ಸೇವೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡುವುದು ಹಾಗೂ ಸಾಮಾಜಿಕ ಅಭಿವೃದ್ಧಿಯ ಸವಾಲುಗಳನ್ನು ಎದುರಿಸುವ ಕುರಿತು ಈ ಸಮಾಲೋಚನೆಯಿಂದ ಸಲಹೆಗಳು ದೊರೆಯುವ ನಿರೀಕ್ಷೆಯಿದೆ.
ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ಸಭೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ ಹಣಕಾಸು ಸಚಿವಾಲಯವು ಪ್ರತಿ ವರ್ಷ ಬಜೆಟ್ಗೆ ಮುನ್ನ ಉದ್ಯಮ ಸಂಘಟನೆಗಳು, ಅರ್ಥಶಾಸ್ತ್ರಜ್ಞರು, ವಿವಿಧ ವಲಯಗಳ ತಜ್ಞರು ಹಾಗೂ ಸಂಬಂಧಿತ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆಯುತ್ತದೆ. ಈ ಸಮಾಲೋಚನೆಗಳಲ್ಲಿ ವ್ಯಕ್ತವಾದ ಸಲಹೆಗಳನ್ನು 2027–28ನೇ ಸಾಲಿನ ಕೇಂದ್ರ ಬಜೆಟ್ ರೂಪಿಸುವಾಗ ಪರಿಗಣಿಸಲಾಗುತ್ತದೆ.