ಸತಾರಾ–ಪುಣೆ ಹೆದ್ದಾರಿಯಲ್ಲಿ ಕಾರು ಪಲ್ಟಿ: ಇಬ್ಬರು ಸಾವು, ಮೂವರಿಗೆ ಗಾಯ
ಸತಾರಾ, ನ. 21 : ಸತಾರಾ–ಪುಣೆ ರಾಷ್ಟ್ರೀಯ ಹೆದ್ದಾರಿಯ ಸುರುರ್ ಬಳಿ ಶನಿವಾರ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಮೃತರನ್ನು ಚಿಪ್ಲೂನ್ ನಿವಾಸಿಗಳಾದ ವಿಜಯ್ ಧೋಂಡು ಪವಾರ್ (70) ಮತ್ತು ವೈಷ್ಣವಿ ವೈಭವ್ ಕದಮ್ (43) ಎಂದು ಪೊಲೀಸರು ಗುರುತಿಸಿದ್ದಾರೆ. ಇಬ್ಬರೂ ಇತರ ಮೂವರೊಂದಿಗೆ ಮುಂಬೈಯಿಂದ ಚಿಪ್ಲೂನ್‌ಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಪೊಲೀಸರ ಪ್ರಕಾರ, ಚಾಲಕನಿಗೆ ವಾಹನ ಚಲಾಯಿಸುವಾಗ ನಿದ್ರೆ ಮಂಪರು ಆವರಿಸಿದ್ದರಿಂದ ಕಾರಿನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೂರು ಬಾರಿ ಪಲ್ಟಿಯಾಗಿದೆ.
ಗಾಯಗೊಂಡ ವೈಭವ್ ಕಾಮಬ್ ಕದಮ್ (45), ವೈಶಾಲಿ ವಿಜಯ್ ಪವಾರ್ (62) ಮತ್ತು ವೇದಾಂತ್ ವೈಭವ್ ಕದಮ್ (13) ಅವರನ್ನು ಸತಾರಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ತನಿಖೆ ಮುಂದುವರಿಸಿದ್ದಾರೆ.