ರಾಷ್ಟ್ರೀಯ

ಎಚ್‌ಪಿವಿ ಲಸಿಕೆಯ ಒಂದು ಕೋಟಿ ಡೋಸ್‌ ಮೈಲಿಗಲ್ಲು ಶ್ಲಾಘಿಸಿದ ಪ್ರಧಾನಿ ಮೋದಿ

ಎಚ್‌ಪಿವಿ ಲಸಿಕೆಯ ಒಂದು ಕೋಟಿ ಡೋಸ್‌ ಮೈಲಿಗಲ್ಲು ಶ್ಲಾಘಿಸಿದ ಪ್ರಧಾನಿ ಮೋದಿ
ನವದೆಹಲಿ, ನ. 23 : ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನದಡಿ ಒಂದು ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದರು. ಇದನ್ನು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ ಅವರು, ಹೆಣ್ಣುಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸಲು ಈ ಅಭಿಯಾನ ನೆರವಾಗಲಿದೆ ಎಂದರು.

‘ಲಸಿಕೆಯ ಪ್ರತಿ ಡೋಸ್‌ ಕೂಡ ಹೆಣ್ಣುಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸುವ ಮತ್ತು ಅವರಿಗೆ ಆರೋಗ್ಯಕರ ಭವಿಷ್ಯ ಒದಗಿಸುವ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯಾಗಿದೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಬರೆದಿದ್ದಾರೆ. ದೇಶವ್ಯಾಪಿ ಅಭಿಯಾನದಲ್ಲಿ ಭಾಗಿಯಾದ ಎಲ್ಲರ ಶ್ರಮವನ್ನೂ ಅವರು ಪ್ರಶಂಸಿಸಿದರು.

2026ರ ಫೆಬ್ರವರಿಯಲ್ಲಿ ಮೋದಿ ಚಾಲನೆ ನೀಡಿದ ಈ ಅಭಿಯಾನವು ಒಂಬತ್ತು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಒಂದು ಕೋಟಿ ಡೋಸ್‌ಗಳ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನವೆಂಬರ್‌ 21ರಂದು ತಿಳಿಸಿತ್ತು. 14 ವರ್ಷದ ಸುಮಾರು 1.2 ಕೋಟಿ ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ವಾರ್ಷಿಕ ಗುರಿಯಲ್ಲಿ ಶೇ. 87ರಷ್ಟನ್ನು ಅಭಿಯಾನ ತಲುಪಿದೆ ಎಂದು ಸಚಿವಾಲಯ ಹೇಳಿದೆ.

ಸ್ವಯಂಪ್ರೇರಿತ ಅಭಿಯಾನದಡಿ ಅರ್ಹ ಹೆಣ್ಣುಮಕ್ಕಳಿಗೆ ಪೋಷಕರ ಒಪ್ಪಿಗೆಯೊಂದಿಗೆ ಗಾರ್ಡಸಿಲ್‌-4 ಲಸಿಕೆಯ ಒಂದು ಡೋಸ್‌ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ನಿಗದಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದೆ.

ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಗುಜರಾತ್‌, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಿಜೋರಾಂ, ಮಧ್ಯ ಪ್ರದೇಶ ಮತ್ತು ಬಿಹಾರ ರಾಜ್ಯಗಳು ತಾವು ಗುರುತಿಸಿದ್ದ ಎಲ್ಲ ಅರ್ಹ ಹೆಣ್ಣುಮಕ್ಕಳಿಗೂ ಲಸಿಕೆ ನೀಡಿವೆ. 29.33 ಲಕ್ಷಕ್ಕೂ ಹೆಚ್ಚು ಡೋಸ್‌ ನೀಡಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ 13.70 ಲಕ್ಷ ಹಾಗೂ ಗುಜರಾತ್‌ 7.75 ಲಕ್ಷ ಡೋಸ್‌ ನೀಡಿವೆ.

ಅಸ್ಸಾಂನಲ್ಲಿ ಶೇ. 95.63, ತೆಲಂಗಾಣದಲ್ಲಿ ಶೇ. 95.28, ಕರ್ನಾಟಕದಲ್ಲಿ ಶೇ. 93.16 ಹಾಗೂ ಉತ್ತರಾಖಂಡದಲ್ಲಿ ಶೇ. 90.17ರಷ್ಟು ಗುರಿ ಸಾಧಿಸಲಾಗಿದೆ.

ಎಚ್‌ಪಿವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕ್ಯಾನ್ಸರ್‌ಗೆ ಮುನ್ನ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ನಿಯಮಿತ ತಪಾಸಣೆ ಕೂಡ ಮುಖ್ಯ ಎಂದು ಆರೋಗ್ಯ ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

ಸುದ್ದಿ ಓದಿ