ರಾಷ್ಟ್ರೀಯ

ನಾಗರ್‌ಕೋವಿಲ್‌ನಲ್ಲಿ ಮಹಿಳೆಯ ಅತ್ಯಾಚಾರ, ಕೊಲೆ ಆರೋಪ: ಏಳು ದಿನಗಳಲ್ಲಿ ವರದಿ ಕೇಳಿದ ಮಹಿಳಾ ಆಯೋಗ

ನಾಗರ್‌ಕೋವಿಲ್‌ನಲ್ಲಿ ಮಹಿಳೆಯ ಅತ್ಯಾಚಾರ, ಕೊಲೆ ಆರೋಪ: ಏಳು ದಿನಗಳಲ್ಲಿ ವರದಿ ಕೇಳಿದ ಮಹಿಳಾ ಆಯೋಗ
ಚೆನ್ನೈ, ನ. 23 : ನಾಗರ್‌ಕೋವಿಲ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಬೋಗಿಯೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ತಮಿಳುನಾಡು ಪೊಲೀಸರಿಗೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಒಬ್ಬರನ್ನು ಬಂಧಿಸಿದ್ದಾರೆ. ಕೃತ್ಯ ನಡೆದಿತ್ತೆನ್ನಲಾದ ಸುಮಾರು ನಾಲ್ಕು ದಿನಗಳ ಬಳಿಕ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆಕೆ ಧರಿಸಿದ್ದ ಉಂಗುರದಲ್ಲಿನ ಗುರುತಿನ ಆಧಾರದಲ್ಲಿ ಆಕೆಯ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಆಯೋಗದ ಅಧ್ಯಕ್ಷೆ ವಿಜಯಾ ರಹಾಟ್ಕರ್ ಅವರು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಮಹೇಶ್ ಕುಮಾರ್ ಅಗರ್ವಾಲ್ ಅವರಿಗೆ ಪತ್ರ ಬರೆದು, ನಿಗದಿತ ಅವಧಿಯೊಳಗೆ ಸಮಗ್ರ ತನಿಖೆ ನಡೆಸುವಂತೆ ಕೋರಿದ್ದಾರೆ. ಭದ್ರತಾ ಲೋಪಗಳಾಗಿವೆಯೇ ಎಂದು ಪರಿಶೀಲಿಸಲು, ಸಿಸಿಟಿವಿ ದೃಶ್ಯಾವಳಿ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂರಕ್ಷಿಸಲು ಹಾಗೂ ಮೃತ ಮಹಿಳೆಯ ಗುರುತು ಮತ್ತು ಕುಟುಂಬದವರನ್ನು ಶೀಘ್ರವಾಗಿ ಪತ್ತೆಹಚ್ಚಲು ಆಯೋಗ ಸೂಚಿಸಿದೆ.

ಮಾಧ್ಯಮ ವರದಿಯ ಆಧಾರದಲ್ಲಿ ಕ್ರಮ ಕೈಗೊಂಡಿರುವ ಆಯೋಗವು ರೈಲು ನಿಲ್ದಾಣಗಳ ಭದ್ರತಾ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸುವಂತೆಯೂ ಕೋರಿದೆ. ಖಾಲಿ ರೈಲು ಬೋಗಿಗಳ ಮೇಲ್ವಿಚಾರಣೆ, ರಾತ್ರಿ ಗಸ್ತು ಹಾಗೂ ಸರ್ಕಾರಿ ರೈಲ್ವೆ ಪೊಲೀಸರು, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ರೈಲ್ವೆ ಅಧಿಕಾರಿಗಳ ನಡುವಿನ ಸಮನ್ವಯಕ್ಕೆ ವಿಶೇಷ ಗಮನ ನೀಡುವಂತೆ ತಿಳಿಸಿದೆ.

ಸುದ್ದಿ ಓದಿ