ರಾಷ್ಟ್ರೀಯ

ಕೋಟಾ ಬಳಿ ರಸ್ತೆ ಅಪಘಾತ: ಧುಳೆಯ ಒಂದೇ ಕುಟುಂಬದ 9 ಮಂದಿ ಸಾವು, 6 ಮಂದಿಗೆ ಗಾಯ

ಕೋಟಾ ಬಳಿ ರಸ್ತೆ ಅಪಘಾತ: ಧುಳೆಯ ಒಂದೇ ಕುಟುಂಬದ 9 ಮಂದಿ ಸಾವು, 6 ಮಂದಿಗೆ ಗಾಯ
ಜೈಪುರ, ನ. 22 : ರಾಜಸ್ಥಾನದ ಕೋಟಾ ಜಿಲ್ಲೆಯ ಶಂಭುಪುರಾ ಬಳಿ ಶನಿವಾರ ಮಧ್ಯರಾತ್ರಿ ನಿಂತಿದ್ದ ಟ್ರಕ್‌ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಾರಾಷ್ಟ್ರದ ಧುಳೆಯ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಸಿಕರ್ ಜಿಲ್ಲೆಯ ಖಾಟು ಶ್ಯಾಮ್‌ಜಿ ದೇವಸ್ಥಾನದಲ್ಲಿ ದರ್ಶನ ಪಡೆದು ಕುಟುಂಬದವರು ಧುಳೆಗೆ ಮರಳುತ್ತಿದ್ದರು. ಕೋಟಾ–ಉದಯಪುರ ಹೆದ್ದಾರಿಯಲ್ಲಿ ದುರಸ್ತಿಗಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಅವರ ವಾಹನ ಡಿಕ್ಕಿ ಹೊಡೆದಿದೆ.

ವಾಹನದ ಚಾಲಕನಿಗೆ ನಿದ್ದೆ ಮಂಪರು ಬಂದಿರಬಹುದು ಎಂದು ಕೋಟಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕೋಟಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮತ್ತು ಇತರ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಗೌತಮ್ ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಸುದ್ದಿ ಓದಿ