ಆರೋಗ್ಯವಂತ ಯುವಶಕ್ತಿಯೇ ಸದೃಢ ಸಮಾಜದ ನಿರ್ಮಾಣಕ್ಕೆ ಅಡಿಪಾಯ
ಯಲಬುರ್ಗಾ 22: ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ, ದೈಹಿಕ ಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಆರಾಮ್ ಫೌಂಡೇಶನ್ ಹಾಗೂ ರಾಯಲ್ ಅಸೋಸಿಯೇಷನ್ ಕ್ಲಬ್ ಸಹಯೋಗದಲ್ಲಿ ಪಟ್ಟಣದಲ್ಲಿ ಆಯೋಜಿಸಿದ್ದ 5 ಕಿ.ಮೀ. ಮ್ಯಾರಥಾನ್ಗೆ ಸಾವಿರಾರು ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಅಕ್ಷಯ್ ಪಬ್ಲಿಕ್ ಶಾಲೆಯಿಂದ ಆರಂಭವಾದ ಓಟವು ಕನಕದಾಸರ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಮೊಗ್ಗಿಬಸವೇಶ್ವರ ದೇವಸ್ಥಾನ, ಬಾಬು ಜಗಜೀವನರಾಂ ವೃತ್ತ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಾಗಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.
ಗದಗ, ಹೊಸಪೇಟೆ, ಇಲಕಲ್ಲ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಭಾಗಗಳಿಂದ ಕ್ರೀಡಾಸಕ್ತರು ಪಾಲ್ಗೊಂಡಿದ್ದರು. ಆರಾಮ್ ಫೌಂಡೇಶನ್ ಸಂಸ್ಥಾಪಕಿ ಮಮತಾ ರಾಯರಡ್ಡಿ ಅವರೂ ಓಟದಲ್ಲಿ ಭಾಗವಹಿಸಿ ಯುವಜನರಿಗೆ ಪ್ರೇರಣೆ ನೀಡಿದರು. ಭಾಗವಹಿಸಿದ ಎಲ್ಲರಿಗೂ ಟಿ-ಶರ್ಟ, ಪ್ರಶಸ್ತಿ ಪ್ರಮಾಣಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು.
ಆರಾಮ್ ಫೌಂಡೇಶನ್ ಸಂಸ್ಥಾಪಕಿ ಮಮತಾ ರಾಯರಡ್ಡಿ ಮಾತನಾಡಿ, ಯುವಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರತಿನಿತ್ಯ ಓಟ, ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು. ಯುವಶಕ್ತಿಯೇ ದೇಶದ ಬಹುದೊಡ್ಡ ಸಂಪತ್ತು. ಇದೇ ಆಶಯದಿಂದ ಮ್ಯಾರಥಾನ್ ಆಯೋಜಿಸಿದ್ದು, ಸಾವಿರಾರು ಜನರು ಪಾಲ್ಗೊಂಡಿರುವುದು ಸಂತಸ ತಂದಿದೆ. ಆರಾಮ್ ಫೌಂಡೇಶನ್ ವತಿಯಿಂದ ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಶಾ ಬಸವರಾಜ ರಾಯರಡ್ಡಿ, ಸುಧೀರ್ ಕೊರ್ಲಳ್ಳಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಹಂಪಯ್ಯಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಜಕ್ಕಲಿ, ಸಂಗಮೇಶ ಗುತ್ತಿ, ಸಾವಿತ್ರಿ ಗೊಲ್ಲರ್, ಡಾ. ನಂದಿತಾ ದಾನರಡ್ಡಿ, ಫರೀದಾಂಬೇಗಂ, ಸವಿತಾ ಓಜನಹಳ್ಳಿ ಸೇರಿದಂತೆ ಗಣ್ಯರು, ಮುಖಂಡರು ಹಾಗೂ ಯುವಕ-ಯುವತಿಯರು ಉಪಸ್ಥಿತರಿದ್ದರು.