ವಿ.ಕ.ರ.ವೇ ಯುವ ಘಟಕದ ಅಧ್ಯಕ್ಷರಾಗಿ ಮೌನೇಶ ಎಚ್. ನಾಯಕ ಆಯ್ಕೆ
ಯಲಬುರ್ಗಾ 20: ವೀರ ಕನ್ನಡಿಗ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ಮೌನೇಶ ಎಚ್. ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವೀರ ಕನ್ನಡಿಗ ರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕನ್ನಡಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸಾಮ್ರಾಟ್ ಅಶೋಕ್ ಅವರ ಆದೇಶದ ಮೇರೆಗೆ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಶಂಕರಗೌಡ ಮಾಲಿ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಸಭೆಯಲ್ಲಿ ಸಂಘಟನೆಯ ಬಲವರ್ಧನೆ, ಕನ್ನಡ ನಾಡು-ನುಡಿ, ನೆಲ-ಜಲ ಹಾಗೂ ಕನ್ನಡಿಗರ ಹಿತಾಸಕ್ತಿಗಳ ರಕ್ಷಣೆ ಕುರಿತು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರ ಕನ್ನಡಿಗ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮೌನೇಶ ಎಚ್. ನಾಯಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಂಘಟನೇಯ ತತ್ವ, ಸಿದ್ಧಾಂತ ಹಾಗೂ ಆಶಯಗಳಿಗೆ ಬದ್ಧರಾಗಿ ಯುವಕರನ್ನು ಸಂಘಟಿಸುವ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಿ ಎಂಬ ಆಶಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.