ಎಸ್.ಎನ್.ಪೇಟೆ ವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸಂಭ್ರಮ ವಿಶೇಷ ದೀಪೋತ್ಸವ
ಬಳ್ಳಾರಿ.20 : ಪವಿತ್ರ ಕಾರ್ತಿಕ ಮಾಸದ ಪ್ರಯುಕ್ತ ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಪ್ರಸಿದ್ಧ ವಿನಾಯಕ ದೇವಸ್ಥಾನದಲ್ಲಿ ಧಾರ್ಮಿಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನಡೆಸಲಾಯಿತು. ಕಾರ್ತಿಕ ಮಾಸದ ಪ್ರಯುಕ್ತ ಪ್ರತಿದಿನ ವಿನಾಯಕ ಸ್ವಾಮಿಗೆ ವಿವಿಧ ಬಗೆಯ ಆಕರ್ಷಕ ಹಾಗೂ ನಯನಮನೋಹರ ಅಲಂಕಾರಗಳನ್ನು ಮಾಡಲಾಗುತ್ತಿದ್ದು, ಕಾರ್ತಿಕ ಮಾಸದ ವಿಶೇಷವಾಗಿ ದೇವಸ್ಥಾನದ ಗರ್ಭಗುಡಿಯನ್ನು ಬಗೆಬಗೆಯ ಸುಗಂಧಭರಿತ ಹೂವುಗಳು, ತಳಿರು ತೋರಣಗಳು ಹಾಗೂ ಆಕರ್ಷಕ ನವಿಲುಗರಿಯ ವಿನ್ಯಾಸದೊಂದಿಗೆ ಅತ್ಯಂತ ಕಲಾತ್ಮಕವಾಗಿ ಅಲಂಕರಿಸಲಾಗಿದೆ.
ವಿದ್ಯುತ್ ದೀಪಾಲಂಕಾರ ಹಾಗೂ ಹಣತೆಗಳ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಗಣಪತಿಯ ಮೂರ್ತಿಯು ಭಕ್ತರ ಕಣ್ಮನ ಸೆಳೆಯುತ್ತಿದೆ. ದೇವಸ್ಥಾನದ ಒಳಭಾಗ ಮತ್ತು ವಿಶಾಲವಾದ ಆವರಣದಲ್ಲಿ ಮುತ್ತೈದೆಯರು ಭಕ್ತಿಪೂರ್ವಕವಾಗಿ ಬಿಡಿಸಿರುವ ವಿವಿಧ ಕಲಾತ್ಮಕ ರಂಗೋಲಿಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿವೆ. ಗಣಪತಿ, ಶಿವಲಿಂಗ ಹಾಗೂ ಕಮಲದ ಹೂವಿನ ಆಕೃತಿಯ ವರ್ಣರಂಜಿತ ರಂಗೋಲಿಗಳನ್ನು ಹಾಕಿ, ಅದರ ಸುತ್ತಲೂ ಸಾಲುಸಾಲಾಗಿ ಹಣತೆಗಳ ದೀಪಗಳನ್ನು ಬೆಳಗಿಸಿರುವುದು ಇಡೀ ದೇವಸ್ಥಾನದಲ್ಲಿ ದೈವಿಕ ಕಳೆಯನ್ನು ತಂದುಕೊಟ್ಟಿದೆ.
ಈ ಧಾರ್ಮಿಕ ಸಂಭ್ರಮದಲ್ಲಿ ವಿನಾಯಕ ದೇವರ ಪರಮ ಭಕ್ತೆಯಾಗಿರುವ ಮುತ್ತೈದೆ ಯುವತಿ ಎಂ. ಚಂದನ ಅವರು ತಮ್ಮ ವಿಶೇಷ ಕಲಾಸೇವೆಯ ಮೂಲಕ ಗಮನ ಸೆಳೆದರು. ಕಾರ್ತಿಕ ಮಾಸದ ಪ್ರಯುಕ್ತ ಪ್ರತಿದಿನ ದೇವಸ್ಥಾನದ ಆವರಣದಲ್ಲಿ ವಿವಿಧ ಬಣ್ಣಗಳನ್ನು ಬಳಸಿ, ವಿವಿಧ ದೇವಾನುದೇವತೆಗಳ ಆಕೃತಿಯ ಅತ್ಯಾಕರ್ಷಕ ರಂಗೋಲಿಗಳನ್ನು ಬಿಡಿಸಿ ಭಕ್ತಿಪೂರ್ವಕ ಸೇವೆ ಹಾಗೂ ಅದ್ಭುತ ಕಲಾ ನೈಪುಣ್ಯಕ್ಕೆ ದೇವಸ್ಥಾನದ ಪ್ರಧಾನ ಅರ್ಚಕರು, ಆಡಳಿತ ಮಂಡಳಿ ಹಾಗೂ ನೂರಾರು ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.
ಕಾರ್ತಿಕ ಮಾಸದ ಈ ವಿಶೇಷ ಅಲಂಕಾರ, ರಂಗೋಲಿ ವೈಭವ ಮತ್ತು ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆಯ ವೇಳೆ ನಗರದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಭಕ್ತರು ಶ್ರೀ ವಿನಾಯಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದೀಪಗಳನ್ನು ಬೆಳಗಿಸಿ ಕೃತಾರ್ಥರಾಗುತ್ತಿದ್ದಾರೆ.