ಬೆಳಗಾವಿ

ರಾಜಕೀಯಕ್ಕಿಂತ ಸಮಾಜ ಸೇವೆಯೇ ನನ್ನ ಮೊದಲ ಆದ್ಯತೆ: ಸಿದ್ಧಾರ್ಥ ಲಕ್ಷ್ಮಣ ವಾಡೆನ್ನವರ

ರಾಜಕೀಯಕ್ಕಿಂತ ಸಮಾಜ ಸೇವೆಯೇ ನನ್ನ ಮೊದಲ ಆದ್ಯತೆ: ಸಿದ್ಧಾರ್ಥ ಲಕ್ಷ್ಮಣ ವಾಡೆನ್ನವರ

        ಹಾರೂಗೇರಿ  20: ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಕ್ಕರೆ ಕುಡಚಿ ಮೀಸಲು ವಿಧಾನಸಭೆ ಮತಕ್ಷೇತ್ರದಿಂದ ಸ್ಪರ್ಧಿಸಿ ಜನಸೇವೆ ಮಾಡಲು ಸಿದ್ಧನಿದ್ದೇನೆ ಎಂದು ಬರಹಗಾರ ಹಾಗೂ ಉದ್ಯಮಿ ಸಿದ್ಧಾರ್ಥ ಲಕ್ಷ್ಮಣ ವಾಡೆನ್ನವರ ಹೇಳಿದರು. 

        ಪಟ್ಟಣ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕುಡಚಿ ವಿಧಾನಸಭೆ ಮತಕ್ಷೇತ್ರದ 30ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ, ಬಡವರಿಗೆ ಆಹಾರ ಹಾಗೂ ಬಟ್ಟೆಗಳ ಕಿಟ್‌ಗಳನ್ನು ನೀಡಲಾಗುತ್ತಿದೆ.

         ರಾಜಕೀಯಕ್ಕೆ ಇನ್ನೂ ಪ್ರವೇಶಿಸಿಲ್ಲ. ರಾಜಕೀಯಕ್ಕಿಂತ ಸಮಾಜ ಸೇವೆಯೇ ನನ್ನ ಮೊದಲ ಆದ್ಯತೆಯಾಗಿದೆ ಎಂದರು. ರಾಜ್ಯದ 224 ಕ್ಷೇತ್ರಗಳನ್ನು ಅಧ್ಯಯನ ಮಾಡಿದ್ದು, ಅವುಗಳಲ್ಲಿ ಕುಡಚಿ ಮತಕ್ಷೇತ್ರದ ಜನ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದಾರೆ. ವಿದ್ಯಾವಂತರಿದ್ದು ತಮಗೆ ಬೇಕಾದವರನ್ನು ಆಯ್ಕೆ ಮಾಡುವ ಪ್ರಭುದ್ಧತೆ, ಪ್ರಜ್ಞಾವಂತಿಕೆ ಇಲ್ಲಿನ ಜನರಲ್ಲಿದೆ.

         ಪಕ್ಷ ಹಾಗೂ ರಾಜಕಾರಣಿಗಳಿಗಿಂತ ತಮ್ಮ ಇಚ್ಛಾಶಕ್ತಿಯಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಕ್ಷೇತ್ರದ ವ್ಯಾಪ್ತಿ ಚಿಕ್ಕದಾಗಿದ್ದು, ಜನರನ್ನು ಬೇಗ ತಲುಪಬಹುದು. ನನ್ನ ಜ್ಞಾನ, ಸಂಪತ್ತು, ಕೈಗಾರಿಕೋದ್ಯಮದ ಬುದ್ಧಿಶಕ್ತಿ ಈ ಜನರಿಗೆ ಸಿಗಬೇಕೆಂಬುದು ನನ್ನ ಆಶಯ. ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದ್ದರೆ ಚುನಾವಣೆಗೆ ಪ್ರವೇಶಿಸುತ್ತೇನೆ. ಸ್ಪರ್ಧಿಸದಿದ್ದರೂ ಜನಸೇವೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು. 

       ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಬಿಎಸ್‌ಇ ಶಾಲೆಗಳನ್ನು ಸ್ಥಾಪಿಸುವುದರಿಂದ ರಾಷ್ಟ್ರಮಟ್ಟದ ಸಮಾನ ಶಿಕ್ಷಣ ಬಡವರ ಮಕ್ಕಳಿಗೆ ದೊರೆಯಬೇಕು. ಆರೋಗ್ಯ ಕೇಂದ್ರಗಳಲ್ಲಿ ತಜ್ಞವೈದ್ಯರ ನೇಮಕದಿಂದ ಬಡವರಿಗೆ ಉಚಿತ ಆರೋಗ್ಯ ಸೇವೆ ಸಿಗಲಿದೆ. ಗ್ರಾಮಗಳಲ್ಲಿ ಉತ್ಪನ್ನಗಳ ಸಂರಕ್ಷಣೆಗಾಗಿ ಗೋಡಾವನಗಳನ್ನು ನಿರ್ಮಿಸುವುದರಿಂದ ರೈತರಿಗೆ ವರದಾನವಾಗಲಿದೆ.

       ನಾನು ತೀವ್ರ ಬಡತನದಿಂದ ಮೇಲೆದ್ದು ಬಂದವನು. ಹೀಗಾಗಿ ಬಡವರು ಮತ್ತು ನಿರುದ್ಯೋಗಿ ಯುವಕರಿಗೆ ಕೈಗಾರಿಕೆ ಮತ್ತು ಉದ್ಯಮ ಪ್ರಾರಂಭಿಸಲು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಪ್ರೋತ್ಸಾಹಿಸುವುದು ನನ್ನ ಉದ್ದೇಶವಾಗಿದೆ ಎಂದರು. ಸಮಾಜದ ಮುಖಂಡರಾದ ರಾಜು ಐತವಾಡೆ, ಎಸ್‌.ಕೆ.ಪಾಟೀಲ, ಸಾಗರ ನಾಗನೂರ, ಅಖಿಲ ಹುಕ್ಕೇರಿ, ಶಬ್ಬೀರ ದೇಸಾಯಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ