ವಿಭಾಗೀಯ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ರನ್ನರ್ ಅಪ್ ಪ್ರಶಸ್ತಿ
ಲೋಕದರ್ಶನ ವರದಿ
ಬೆಳಗಾವಿ 18 : ಹಳಿಯಾಳದ ವಿಐಡಿಐಟಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಭಾಗೀಯ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಸಿದ್ಧರಾಮೇಶ್ವರ ಎಜುಕೇಶನ್ ಟ್ರಸ್ಟ್ನ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ರನ್ನರ್‌ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ಪಂದ್ಯಾವಳಿಯ ಅಂತಿಮ ಹಣಾಹಣಿ ಅತ್ಯಂತ ರೋಚಕವಾಗಿ ನಡೆದಿದ್ದು, ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ತಂಡವು ಕೇವಲ ಒಂದು ಅಂಕದ ಅಂತರದಿಂದ 39-40 ಅಂಕಗಳನ್ನು ಗಳಿಸಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.
ಕೊನೆಯ ಕ್ಷಣದವರೆಗೂ ಎದುರಾಳಿ ತಂಡಕ್ಕೆ ತೀವ್ರ ಪೈಪೋಟಿ ನೀಡಿದ ಆಟಗಾರರು ತಮ್ಮ ಕ್ರೀಡಾ ಸಾಮರ್ಥ್ಯ, ತಂಡದ ಒಗ್ಗಟ್ಟು, ಶಿಸ್ತು ಹಾಗೂ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.ಈ ಸಾಧನೆಯೊಂದಿಗೆ ಎಸ್ಜಿಬಿಐಟಿ ತಂಡವು ರಾಜ್ಯಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಬೆಂಗಳೂರಿನ ಆರ್ವಿಐಟಿಎಂ ಮಹಾವಿದ್ಯಾಲಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಆಶೀರ್ವದಿಸಿ ತಂಡಕ್ಕೆ ಶುಭ ಹಾರೈಸಿದರು. ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ಎಫ್.ವಿ. ಮಾನ್ವಿ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದರು. ಪ್ರಾಚಾರ್ಯರಾದ ಡಾ. ಬಿ.ಆರ್. ಪಟಗುಂದಿ ಅವರು ತಂಡದ ಪ್ರದರ್ಶನಕ್ಕೆ ಹರ್ಷ ವ್ಯಕ್ತಪಡಿಸಿ,
ಎಲ್ಲ ಆಟಗಾರರನ್ನು ಅಭಿನಂದಿಸಿದರು. ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಧರ ಎಸ್. ನೇಮಗೌಡ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದರು. ತಂಡದ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಕ್ರೀಡಾ ಸಂಯೋಜಕರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ರಾಜ್ಯಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮಹಾವಿದ್ಯಾಲಯಕ್ಕೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.