ಬೆಳಗಾವಿ

ಗ್ರಾಮೀಣ ಶಾಲೆಗಳ 39 ಮಕ್ಕಳಿಗೆ ವಿಮಾನದಲ್ಲಿ ಹೈದರಾಬಾದ್ ಪ್ರವಾಸ

ಗ್ರಾಮೀಣ ಶಾಲೆಗಳ 39 ಮಕ್ಕಳಿಗೆ ವಿಮಾನದಲ್ಲಿ ಹೈದರಾಬಾದ್ ಪ್ರವಾಸ


              ಉಗರಗೋಳ 18 : ಸಮೀಪದ ಹಿರೇಕುಂಬಿ ಗ್ರಾಮದ ಮೂರು ಸರ್ಕಾರಿ ಪ್ರಾಥಮಿಕ ಶಾಲೆಗಳ 39 ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಮಾಡುವ ಭಾಗ್ಯ ಒಲಿದು ಬಂದಿದೆ. ನವೆಂಬರ್ 20ರಂದು ಹಿರೇಕುಂಬಿಯಿಂದ ಬಸ್‌ನಲ್ಲಿ ಹುಬ್ಬಳ್ಳಿ ತಲುಪಲಿರುವ ವಿದ್ಯಾರ್ಥಿಗಳು, ಅಲ್ಲಿಂದ ಹೈದರಾಬಾದ್‌ಗೆ ರೈಲಿನಲ್ಲಿ ತೆರಳುವರು.  ಅಲ್ಲಿನ ಬಿರ್ಲಾ ಮಂದಿರ, ಜಲವಿಹಾರ, ಎನ್‌ಟಿಆರ್ ಗಾರ್ಡನ್, ಲುಂಬಿನಿ ಪಾರ್ಕ್‌, ರಾಮೋಜಿರಾವ್ ಫಿಲ್ಮ್‌ ಸಿಟಿ, ಚಾರ್‌ಮಿನಾರ್, ಸಲ್ರಜಂಗ್ ಮ್ಯೂಜಿಯಂ ಕಣ್ತುಂಬಿಕೊಳ್ಳುವರು.

              ಮೂರು ದಿನಗಳ ಕಾಲ ಪ್ರವಾಸಿತಾಣಗಳನ್ನು ವೀಕ್ಷಿಸಿ, ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಆಗಮಿಸುವರು. ನಂತರ ಬಸ್ ಮೂಲಕ ತಮ್ಮೂರು ತಲುಪವರು. ಈ ಪ್ರವಾಸಕ್ಕೆ ?3.50 ಲಕ್ಷ ಖರ್ಚಾಗಲಿದೆ. ಈ ಪೈಕಿ ?3 ಲಕ್ಷ ಮೊತ್ತವನ್ನು ಇದೇ ಸರ್ಕಾರಿ ಶಾಲೆಗಳಲ್ಲಿ ಕಲಿತಿರುವ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ನಿವೃತ್ತ ಎಂಜಿನಿಯರ್  ಇಮ್ತಿಯಾಜ್ ದಫೇದಾರ ಭರಿಸಲಿದ್ದಾರೆ. ಉಳಿದ ಮೊತ್ತವನ್ನು ವಿದ್ಯಾರ್ಥಿಗಳು ನೀಡಿದ್ದಾರೆ. 

             ಹಿರೇಕುಂಬಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ವಿಮಾನವೇರಲು ಕಾತರವಾಗಿದ್ದು, ಪ್ರವಾಸಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ‘ನಾವು ಈ ಹಿಂದೆಲ್ಲ ಬಗಳಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಮಕ್ಕಳನ್ನು ಕರೆದೊಯ್ದಿದ್ದೆವು.

             ಇದೇ ಮೊದಲ ಬಾರಿ ವಿಮಾನದಲ್ಲಿ ಕೊಂಡೊಯ್ಯುತ್ತಿರುವ ಕಾರಣ ಖುಷಿಯಾಗಿದೆ’ ಎಂದು ಶಿಕ್ಷಕಿ ಲಲಿತಾ ಮಾಳಗಿ ತಿಳಿಸಿದರು. ‘ನಾವು ಬಡ ಮಕ್ಕಳು. ನಮ್ಮೂರಿನ ಆಗಸದಲ್ಲಿ ವಿಮಾನ ಹಾರುವುದನ್ನೇ ನೋಡಿಯೇ ಎಷ್ಟೋ ಖುಷಿಪಡುತ್ತಿದ್ದೆವು. ನಾವು ಯಾವಾಗ ಇದನ್ನು ಏರಬಹುದು ಎಂದು ಅಂದುಕೊಳ್ಳುತ್ತಿದ್ದೆವು.

           ಭವಿಷ್ಯದಲ್ಲಿ ಒಮ್ಮೆಯಾದರೂ ವಿಮಾನ ಏರುತ್ತೇವೆಯೋ ಅಥವಾ ಇಲ್ಲವೋ ಎಂಬ ಅನುಮಾನ ಇತ್ತು. ಆದರೀಗ, ವಿಮಾನದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದಕ್ಕೆ ತಯಾರಿ ಮಾಡಿಕೊಂಡಿದ್ದೇವೆ’ ಎಂದು ವಿದ್ಯಾರ್ಥಿಗಳಾದ ಯಶೋಧಾ ನಾಯ್ಕರ ಮತ್ತು ಭೀಮಪ್ಪ ಗಿಡಮೂರ್ಕಿ ಹೇಳಿದರು. ‘ನಾನು ಹಿರೇಕುಂಬಿ ಗ್ರಾಮದವನು. ಅಲ್ಲಿನ ಸರ್ಕಾರಿ ಶಾಲೆಗಳಲ್ಲೇ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡೆ. ತಂದೆ ಶಿಕ್ಷಕರು. ನಮ್ಮೂರಿನ ಶಾಲೆಗಳಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಮನಸ್ಸಿತ್ತು. ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸಲು ತೀರ್ಮಾನಿಸಿರುವೆ’ ಎಂದು ಈಗ ಗೋಕಾಕದಲ್ಲಿ ನೆಲೆಸಿರುವ ಇಮ್ತಿಯಾಜ್ ದಫೇದಾರ ತಿಳಿಸಿದರು. 

             ‘39 ಮಕ್ಕಳೊಂದಿಗೆ ನಾಲ್ವರು ಶಿಕ್ಷಕರು ಹಾಗೂ ನನ್ನ ನಾಲ್ವರು ಗೆಳೆಯರು ಹೋಗುತ್ತಿದ್ದಾರೆ. ಎಲ್ಲರಿಗೂ ಪ್ರವಾಸದ ವ್ಯವಸ್ಥೆ ಮಾಡಿದ್ದೇನೆ. ಮುಂದಿನ ವರ್ಷ ಹಿರೇಕುಂಬಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳನ್ನೂ ವಿಮಾನದಲ್ಲಿ ಕಳುಹಿಸಲು ಚಿಂತನೆ ನಡೆಸಿದ್ದೇನೆ’ ಎನ್ನುತ್ತಾರೆ ಅವರು. ಪ್ರವಾಸ ಎಂದರೆ ಮಕ್ಕಳಿಗೆ ಖುಷಿ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುತ್ತಿರುವುದು  ಶ್ಲಾಘನೀಯ.

         ಆದರೂ, ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯದ ಕಡೆಗೂ ಗಮನ ಕೊಡಬೇಕು ಎಂದು ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ಹೇಳಿದರು. ಸರ್ಕಾರಿಶಾಲೆ ಮಕ್ಕಳನ್ನು ವಿಮಾನದಲ್ಲಿ ಕರೆದೊಯ್ಯುತ್ತಿರುವ ದಫೇದಾರ ಕೆಲಸ ಶ್ಲಾಘನೀಯ ಎಂದು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಹೇಳಿದರು. 


ಸುದ್ದಿ ಓದಿ