ಮಹಿಳೆಯರ ಆರೋಗ್ಯವೇ ಕುಟುಂಬ ಮತ್ತು ಸ್ವಸ್ಥ ಸಮಾಜದ ನಿಜವಾದ ಶಕ್ತಿ: ಶಾಸಕ ವಿಶ್ವಾಸ ವೈದ್ಯ
ಸವದತ್ತಿ 18 : ಮಹಿಳೆಯರ ಆರೋಗ್ಯವೇ ಒಂದು ಕುಟುಂಬ ಹಾಗೂ ಸ್ವಸ್ಥ ಸಮಾಜದ ನಿಜವಾದ ಶಕ್ತಿಯಾಗಿದೆ ಎಂದು ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅಭಿಪ್ರಾಯಪಟ್ಟರು.ನಗರದ ಗುರುಭವನದಲ್ಲಿ ಶ್ರೀ ವಿಶ್ವಾಸ ವೈದ್ಯ ಗ್ರೂಪ್ ಹಾಗೂ ಶ್ರೀ ರೇಣುಕಾದೇವಿ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈನಂದಿನ ಕೆಲಸಗಳು ಮತ್ತು ಕೌಟುಂಬಿಕ ಜವಾಬ್ದಾರಿಗಳ ಒತ್ತಡದಲ್ಲಿ ಮಹಿಳೆಯರು ಅನೇಕ ಬಾರಿ ತಮ್ಮ ಸ್ವಂತ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸುತ್ತಾರೆ. ಇದನ್ನು ಮನಗಂಡು, ನಮ್ಮ ಭಾಗದ ಮಹಿಳೆಯರಿಗೆ ಉತ್ತಮ ವೈದ್ಯಕೀಯ ತಪಾಸಣೆ ಹಾಗೂ ತಜ್ಞ ವೈದ್ಯರ ಸಲಹೆಗಳು ಸುಲಭವಾಗಿ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಈ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಶಿಬಿರದಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಶ್ರೀಪಾದ ಸಬನಿಸ ಮಾತನಾಡಿ, ಕುಟುಂಬದ ಆಧಾರಸ್ತಂಭವಾಗಿರುವ ಪ್ರತಿಯೊಬ್ಬ ಮಹಿಳೆಯೂ ತಮ್ಮ ಸ್ವಂತ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.
ಇಂದಿನ ಧಾವಂತದ ಜೀವನಶೈಲಿಯಲ್ಲಿ ಮಹಿಳೆಯರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಡೆಗಣಿಸುವುದು ಹೆಚ್ಚಾಗಿದೆ. ರೋಗಗಳು ಬರುವ ಮುನ್ನವೇ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರೂಪಾ ಕೂಡಲಗಿಮಠ ಮಾತನಾಡಿ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಆರೋಗ್ಯ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಗೀತಾ ಸೂಡಿ, ಡಾ. ವಿಜಯಲಕ್ಷ್ಮೀ, ಡಾ. ಶಶಿಕಲಾ ತಡಕೋಡ, ಡಾ. ನಿಲಮ್ಮ ನಾವಿಕ, ಸಿ.ಬಿ. ಬಾಳಿ ಸೇರಿದಂತೆ ಹಲವು ಪ್ರಮುಖರು, ವೈದ್ಯಕೀಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.