ವಿದ್ಯಾರ್ಥಿನಿಯರಲ್ಲಿ ಋತುಚಕ್ರ ನೈರ್ಮಲ್ಯ ಅರಿವು ಮೂಡಿಸಿದ ‘ಕರ್ನಾಟಕದ ಪ್ಯಾಡ್ ವುಮನ್’ ಅಭಿಯಾನ
ಯಲಬುರ್ಗಾ 21: ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಗುರುವಾರ ಯಲಬುರ್ಗಾ ತಾಲೂಕಿನ ಹೊಸಳ್ಳಿ ಮತ್ತು ಬಳೂಟಗಿ ವಸತಿ ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೊಪ್ಪಳದ ಸಾಮಾಜಿಕ ಉದ್ಯಮಿ ಹಾಗೂ ‘ಸಂಗೀನಿ ಪಿಂಕ್ ಪ್ಯಾಡ್’ ಸಂಸ್ಥೆಯ ಸಂಸ್ಥಾಪಕಿ ಭಾರತಿ ಗುಡ್ಲಾನೂರು ಅವರು ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ, ಸ್ಯಾನಿಟರಿ ಪ್ಯಾಡ್ಗಳ ಸುರಕ್ಷಿತ ಬಳಕೆ ಮತ್ತು ವೈಜ್ಞಾನಿಕ ವಿಲೇವಾರಿ ಕುರಿತು ಮಾಹಿತಿ ನೀಡಿದರು. ಮುಟ್ಟು ಸಹಜ ಜೈವಿಕ ಪ್ರಕ್ರಿಯೆಯಾಗಿದ್ದು,
ಈ ಕುರಿತು ಸಂಕೋಚ ಪಡದೆ ಮುಕ್ತವಾಗಿ ಮಾತನಾಡಬೇಕು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಮುಟ್ಟಿನ ಕುರಿತು ಇರುವ ಮೂಢನಂಬಿಕೆಗಳನ್ನು ತೊಡೆದುಹಾಕಿ ವೈಜ್ಞಾನಿಕ ಅರಿವು ಬೆಳೆಸುವುದು ಅಗತ್ಯ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಯಲಬುರ್ಗಾ ತಾಲೂಕು ಅಧ್ಯಕ್ಷೆ ಸವಿತಾ ಮುರಡಿಮಠ, ಮಾಜಿ ಅಧ್ಯಕ್ಷೆ ಜ್ಯೋತಿ ಪಲ್ಲೆದ, ಕಾರ್ಯದರ್ಶಿ ಸುನೀತಾ ಪತಂಗರಾಯ್ ಹಾಗೂ ಸದಸ್ಯರಾದ ಲತಾ ಕಲ್ಯಾಣಿ ಮತ್ತು ರೇಖಾ ಅಯ್ಯನಗೌಡ್ರು ಸೇರಿದಂತೆ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.