ಬೀದಿ ನಾಟಕದ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಗೃತಿ
ಬಳ್ಳಾರಿ 22 : ಸರ್ಕಾರದ ವಿವಿಧ ಗ್ಯಾರಂಟಿ ಹಾಗೂ ಜನಪರ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಇಬ್ರಾಹಿಂಪುರದ ಚಿಗುರು ಕಲಾತಂಡದ ಸಂಯುಕ್ತ ಆಶ್ರಯದಲ್ಲಿ, ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಕ್ರಮದಡಿ ಶನಿವಾರ ಕಾರ್ಯಕ್ರಮ ನಡೆಯಿತು. ಪಂಚಾಯಿತಿ ಬಿಲ್ ಕಲೆಕ್ಟರ್ ಹುಲುಗಣ್ಣ, ತಿಮ್ಮಪ್ಪ ಹಾಗೂ ಗ್ರಾಮದ ಗುರುಹಿರಿಯರು ತಮಟೆ ಬಾರಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು.
ಗ್ರಾಮದ ಹಿರಿಯರಾದ ಮೇಟಿಗೌಡ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹುಲುಗಣ್ಣ ಅವರು, ಸರ್ಕಾರವು ಜನಸಾಮಾನ್ಯರಿಗಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಹೊಸ ಯೋಜನೆಗಳ ಕುರಿತು ಪ್ರತಿಯೊಬ್ಬರೂ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಮತ್ತು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಚಿಗುರು ಕಲಾತಂಡದ ಕಲಾವಿದರಾದ ಎಸ್.ಎಂ. ಹುಲುಗಪ್ಪ, ಎಚ್. ಎರಿಸ್ವಾಮಿ, ವಿಜಯ್ ಕುಮಾರ್, ಎಚ್. ರಮೇಶ್, ವೈ. ತಾಯಪ್ಪ, ಹನುಮಯ್ಯ, ಎಚ್. ಗಂಗಮ್ಮ, ವೈ. ರುತಮ್ಮ, ಪ್ರಭಾವತಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.