ಕರವೇ (ಶಿವರಾಮೇಗೌಡ) ಬಣ ನೊಂದವರ ಧ್ವನಿ ಕನ್ನಡದ ಆಸ್ವಿತೆಯಾಗಿದೆ : ರಾಜಶೇಖರ್
ಬಳ್ಳಾರಿ. ನ. 21 : ಕನ್ನಡ ನಾಡು, ನುಡಿ, ಜಲ, ನೆಲ ಹಾಗೂ ಕನ್ನಡಿಗರ ಸ್ವಾಭಿಮಾನದ ರಕ್ಷಣೆಗಾಗಿ ರಾಜ್ಯಾದ್ಯಂತ ನಿರಂತರವಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಸಂಘಟನೆಗೆ ಬಳ್ಳಾರಿಯಲ್ಲಿ ಇಂದು ಆನೆಬಲ ಬಂದಂತಾಗಿದೆ. ವೇದಿಕೆಯ ಜನಪರ ಮತ್ತು ಕನ್ನಡಪರ ಹೋರಾಟಗಳ ಸಿದ್ಧಾಂತಗಳನ್ನು ಮೆಚ್ಚಿ, ನಗರದ ಪ್ರತಿಷ್ಠಿತ ‘ನಿಫ್ಸಾನ್’ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅಂಗಡಿ ಸಾಗರ್ ಹಾಗೂ ಅವರ ತಂಡ ಶನಿವಾರ ಅಧಿಕೃತವಾಗಿ ಕರವೇ ಸೇರೆ್ಡಯಾಯಿತು.
ನಗರದ ಪಾರ್ವತಿ ನಗರದಲ್ಲಿರುವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳ ಜಿಲ್ಲಾಧ್ಯಕ್ಷರಾದ ಜಿ. ರಾಜಶೇಖರ್ (ಕುರಟ್ಟಿ ರಾಜಣ್ಣ) ಅವರ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಈ ಬೃಹತ್ ಸೇರೆ್ಡ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ನೂತನ ಸದಸ್ಯರನ್ನು ವೇದಿಕೆಯ ಪದಾಧಿಕಾರಿಗಳು ಹೂಗುಚ್ಛ ನೀಡಿ, ಕನ್ನಡದ ಶಾಲು ಹೊದಿಸಿ, ವೇದಿಕೆಯ ಧ್ವಜವನ್ನು ಹಸ್ತಾಂತರಿಸುವ ಮೂಲಕ ಸಂಘಟನೆಗೆ ಆತ್ಮೀಯವಾಗಿ ಬರಮಾಡಿಕೊಂಡರು.
ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಹಾಗೂ ವ್ಯಾಪಾರ-ವಾಣಿಜ್ಯ ವಲಯದಲ್ಲೂ ಕನ್ನಡದ ಕಂಪನ್ನು ಪಸರಿಸುವ ಉದ್ದೇಶದಿಂದ ಇದೇ ವೇದಿಕೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ‘ವಾಣಿಜ್ಯ ಮತ್ತು ಕೈಗಾರಿಕೆಗಳ ಬಳ್ಳಾರಿ ನಗರ ಅಧ್ಯಕ್ಷರನ್ನಾಗಿ’ ಸತೀಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ, ಅಧಿಕೃತ ನೇಮಕಾತಿ ಪತ್ರವನ್ನು ವಿತರಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಅವರಿಗೆ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಪದಾಧಿಕಾರಿಗಳು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಜಿ. ರಾಜಶೇಖರ್ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕೇವಲ ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ನೊಂದವರ ಧ್ವನಿಯಾಗಿ, ಕನ್ನಡಿಗರ ಉದ್ಯೋಗ ಮತ್ತು ಹಕ್ಕುಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಇಂದು ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಿಫ್ಸಾನ್ ಸಂಸ್ಥೆಯ ಸಿಇಒ ಅಂಗಡಿ ಸಾಗರ್ ಮತ್ತು ಅವರ ಯುವ ತಂಡ ನಮ್ಮೊಂದಿಗೆ ಕೈಜೋಡಿಸಿರುವುದು ಅತ್ಯಂತ ಸಂತಸದ ವಿಷಯ" ಎಂದರು.
ಮುಂದುವರಿದು ಮಾತನಾಡಿದ ಅವರು, "ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯ ಚಟುವಟಿಕೆಗಳು ವೇಗವಾಗಿ ಬೆಳೆಯುತ್ತಿವೆ. ಇಲ್ಲಿನ ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಸಿಗಬೇಕು. ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ನೂತನ ನಗರ ಅಧ್ಯಕ್ಷರಾದ ಸತೀಶ್ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಾಡು-ನುಡಿಯ ವಿಚಾರದಲ್ಲಿ ಯಾರಿಗೇ ಅನ್ಯಾಯವಾದರೂ ಕರವೇ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲು ಸದಾ ಸಿದ್ಧರಿದ್ದಾರೆ" ಎಂದು ಎಚ್ಚರಿಕೆ ಹಾಗೂ ಕರೆ ನೀಡಿದರು.
ಮಹಿಳಾ ಘಟಕಕ್ಕೆ ಶಿಲ್ಪ ಅವರನ್ನು ಮತ್ತು ಸತೀಶ್ ಅವರನ್ನು ಕೈಗಾರಿಕೆ ಕ್ಷೇತ್ರದ ಘಟಕಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.ಈ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಜಡೇಗೌಡ, ಮಂಜುನಾಥ, ಜಿಲ್ಲಾ ಸಂಚಾಲಕ ರಾಜಶೇಖರ್ ಗೌಡ, ಪ್ರಮುಖ ಮುಖಂಡರಾದ ಮಂಜು, ದುರ್ಗೇಶ್, ಹುಲಿಗೇಶ್, ಮೋಕ ಉಮಾಪತಿ, ಎತ್ತಿನ ಬೂದಿಹಾಳ ನಂದೀಶ್, ವಿಜಯ್ ಗೌಡ, ಅಶೋಕ ಶಾಬಾದಿ, ಹನುಮೇಶ, ಶರತ್, ಕುಮಾರ್,
ಸಂಜಯ್, ಪಿಂಜಾರಿ ಜೀಲಾನ್ ಭಾಷ, ಯಶವಂತ ಉಪಸ್ಥಿತರಿದ್ದರು.ಅಲ್ಲದೆ, ಮಹಿಳಾ ಘಟಕದ ಅಧ್ಯಕ್ಷೆ ಅಮಿತಿ ಶಿಲ್ಪಾ, ಪದಾಧಿಕಾರಿಗಳಾದ ಕೌಸಲ್ಯ, ಸುಮ, ಶೋಭಾ, ಶ್ವೇತ, ನಿಶಾ, ಜುಬೇದ ಬೇಗಂ, ಸಾವಿತ್ರಿ ಯಾದವ್, ಸಿದ್ದಲಿಂಗ ಶಾಕಿ, ಲಾವಣ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ನಿಫ್ಸಾನ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.