‘ನಿಮಗಾಗಿ ನಾವು’ ಸಂಸ್ಥೆಯಿಂದ 6ನೇ ವರ್ಷದ ಕನ್ನಡ ಜಾತ್ರೆ ಸಂಭ್ರಮದಿಂದ ಆಚರಣೆ; ಕನ್ನಡದ ಸಾಧಕರಿಗೆ ಸನ್ಮಾನ
ಬಳ್ಳಾರಿ 22: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು ಮತ್ತು ಬೆಳವಣಿಗೆಯ ಉದ್ದೇಶದಿಂದ ‘ನಿಮಗಾಗಿ ನಾವು’ ಸಂಸ್ಥೆ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಕನ್ನಡ ಜಾತ್ರೆ ಶನಿವಾರ ಸಂಭ್ರಮದಿಂದ ನಡೆಯಿತು.
ನಗರದ ಆರ್‌ಟಿಒ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಆವರಣದಲ್ಲಿ ಮೇಯರ್ ಗಾದೆಪ್ಪ ಅವರು ಕನ್ನಡ ಜಾತ್ರೆಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಬಯಲಾಟ ಕಲಾವಿದೆ ಹರಿಜನ ಓಂಕಾರಮ್ಮ ಹಾಗೂ ಮಾಜಿ ಶಾಸಕ ಹರಗಿನದೋಣಿ ಸಣ್ಣ ಬಸವನಗೌಡ ಅವರ ವಂಶಸ್ಥರು ಮತ್ತು ಉದ್ಯಮಿ ಮಹಾರುದ್ರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿವಂಗತ ಗೋಡೆ ಶಿವರಾಜ್ ಅವರ ‘ನಂದನ ವನ’ ಕವನ ಸಂಕಲನವನ್ನು ಅವರ ಕುಟುಂಬಸ್ಥರು ಹಾಗೂ ಗಣ್ಯರು ಬಿಡುಗಡೆಗೊಳಿಸಿದರು.
ಕನ್ನಡ ಜಾತ್ರೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕನ್ನಡ ನಾಡಗೀತೆ ಗಾಯನ, ಕನ್ನಡ ಹಾಡುಗಳ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. .
ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ ಗುರೂಜಿ, ರಾಮಾಂಜಿನೇಯಲು ಪಿ.ಎಂ ಕಾರ್ಯನಿರ್ವಾಹಕ ಅಭಿಯಂತರರು, ದ್ರಾಕ್ಷಯನಿ ವೈದ್ಯರು, ಸಿದ್ಮಲ್ ಮಂಜುನಾಥ್ ಕನ್ನಡ ಪರ ಹೋರಾಟಗಾರರು,
ಕಲಾವಿದ ಯಲ್ಲನಗೌಡ ಶಂಕರ ಬಂಡೆ, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಚಾರ್ಯರು ದೀಲೀಪ್ ಕಾಂಬ್ಳೆ, ಶಿವಶಂಕರಯ್ಯ ಆಧ್ಯಾತ್ಮ ಚಿಂತಕರು, ರೈತ ಹೋರಾಟಗಾರ ಶರಣಬಸಪ್ಪ, ನಿರಂಜನ.ಪಿ.ಎಂ ಇಂಜಿನಿಯರ್ ಹಾಗೂ ಷಣ್ಮುಖ ಸಿನ್ಮಾ ನಟ-ನಿರ್ದೇಶಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕುಂ. ವೀರಭದ್ರ್ಪ ಅವರಿಗೆ ‘ಕನ್ನಡದ ಕಣ್ಮಣಿ’ ಪ್ರಶಸ್ತಿ ಹಾಗೂ ಹಿರಿಯ ರಂಗಕರ್ಮಿ ಹಂದ್ಯಾಳ್ ಪುರುಷೋತ್ತಮ ಅವರಿಗೆ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಹಾಗೂ ಸಮಾಜ ಸೇವಕರಾದ ಗೀತಾವೀರೇಶ್ ಅಧ್ಯಕ್ಷರು ಜೀವನ್ ಸಂಗೀತ ಮತ್ತು ಜೆ ಪಿ ಮಂಜುನಾಥ ರವರನ್ನು ಸನ್ಮಾನಿಸಲಾಯಿತು.
ಹತ್ತನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಬಿ. ಮಾರುತಿ ‘ಕನ್ನಡದ ಕೂಸು’ ಪ್ರಶಸ್ತಿ ನೀಡಿ ಗೌರವಿಸಿದರು.
ಕನ್ನಡ ನಾಡು-ನುಡಿ, ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮಹತ್ವ ಸಾರುವ ಮೂಲಕ ಕನ್ನಡಾಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಕನ್ನಡ ಜಾತ್ರೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ನಿರೂಪಣೆಯನ್ನು ವೀಣಾ,ಶಾರದ, ಮಂಜುನಾಥ ಎಸ್ ಕೋಟಿ ನೆರವೇರಿಸಿದರು.