ಬಳ್ಳಾರಿಯಲ್ಲಿ ‘ತಿಂಗಳ ಸೊಬಗು’ ಸಾಂಸ್ಕೃತಿಕ ಕಾರ್ಯಕ್ರಮ ಪುನರಾರಂಭ: ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶ- ನಾಗರಾಜ. ಬಿ
ಬಳ್ಳಾರಿ 22: ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಸಾರ್ವಜನಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ನಗರದ ಡಾ. ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಸುಭದ್ರಮ್ಮ ಮನ್ನೂರು ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ‘ತಿಂಗಳ ಸೊಬಗು’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕಲಾ ಪ್ರಕಾರಗಳು ಪ್ರೇಕ್ಷಕರ ಗಮನ ಸೆಳೆದವು.
ಬಳ್ಳಾರಿಯ ಖ್ಯಾತ ಹಾಸ್ಯ ಕಲಾವಿದ ಎ.ಎಂ. ಎರಿಸ್ವಾಮಿ ಅವರು ತಮ್ಮ ಚಟಾಕಿಗಳ ಮೂಲಕ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ಬಳ್ಳಾರಿಯ ಲಕ್ಷ್ಮಿ ಕಲಾ ಟ್ರಸ್ಟ್ ತಂಡದ ಕಲಾವಿದರು ಆಕರ್ಷಕ ಸಮೂಹ ನೃತ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಬಳ್ಳಾರಿ ತಾಲೂಕಿನ ಎಂ. ಗೋನಾಳ ವೀರಭದ್ರೇಶ್ವರ ಬಯಲಾಟ ಕಲಾವಿದರ ಸಂಘದಿಂದ ‘ವೀರ ಅಭಿಮನ್ಯು ಕಾಳಗ’ದ ಆಯ್ದ ಸನ್ನಿವೇಶಗಳು ರಂಗದಲ್ಲಿ ಮೂಡಿಬಂದು ಪ್ರೇಕ್ಷಕರನ್ನು ರಂಜಿಸಿದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಮಾತನಾಡಿ, ಕಳೆದ ಒಂದು ವರ್ಷದಿಂದ ಪ್ರೇಕ್ಷಕರ ಕೊರತೆಯ ಕಾರಣದಿಂದ ಸ್ಥಗಿತಗೊಂಡಿದ್ದ ‘ತಿಂಗಳು ಸೊಬಗು’ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇದೀಗ ಮತ್ತೆ ಆರಂಭಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳ ಪ್ರಯತ್ನದ ಫಲವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸ್ಥಳೀಯ ನುರಿತ ಹಾಗೂ ಹೊಸ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರತಿ ತಿಂಗಳು ಏರಿ್ಡಸಲಾಗುತ್ತಿದ್ದ ಈ ಕಾರ್ಯಕ್ರಮವನ್ನು ಕಳೆದ ಒಂದು ವರ್ಷದಿಂದ ನಡೆಸಿರಲಿಲ್ಲ. ಇದೀಗ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಪುನರಾರಂಭಿಸಲಾಗಿದ್ದು, ಕಲಾಭಿಮಾನಿಗಳು, ಪ್ರೇಕ್ಷಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕಲಾಸಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ವಿವಿಧ ಕಲಾ ಪ್ರಕಾರಗಳನ್ನು ಕಣ್ತುಂಬಿಕೊಂಡರು.