ಚೀನಾದೊಂದಿಗಿನ ಭಾರತದ ಶಕ್ತಿ ಅಂತರ 2018ರ ಬಳಿಕ ಕನಿಷ್ಠ ಮಟ್ಟಕ್ಕೆ, ನಾಯಕತ್ವದಲ್ಲಿ ಮೋದಿಗೆ ಎರಡನೇ ಸ್ಥಾನ
ಒಟ್ಟಾರೆ ಶ್ರೇಯಾಂಕದಲ್ಲಿ ಅಮೆರಿಕ ಮತ್ತು ಚೀನಾದ ನಂತರ ಭಾರತ ಸತತ ಮೂರನೇ ವರ್ಷವೂ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಜಪಾನ್, ರಷ್ಯಾ ಮತ್ತು ಆಸ್ಟ್ರೇಲಿಯಾ ಭಾರತಕ್ಕಿಂತ ಹಿಂದಿವೆ. ಭಾರತದ ಅಂಕ 0.5ರಷ್ಟು ಏರಿಕೆಯಾಗಿ 40.5ಕ್ಕೆ ತಲುಪಿದ್ದು, ಅಗ್ರ 10 ರಾಷ್ಟ್ರಗಳ ಪೈಕಿ ಇದೇ ಅತಿ ದೊಡ್ಡ ಏರಿಕೆ. ಚೀನಾದ ಅಂಕ 0.1ರಷ್ಟು ಇಳಿದು 73.6ಕ್ಕೆ ತಲುಪಿದ್ದು, ಉಭಯ ದೇಶಗಳ ನಡುವಿನ ಅಂತರ 33.1 ಅಂಕಗಳಿಗೆ ಇಳಿದಿದೆ. ಅಗ್ರ 10 ರಾಷ್ಟ್ರಗಳಲ್ಲಿ ಏರಿಕೆಯ ಪ್ರವೃತ್ತಿಯನ್ನು ಸೂಚಿಸುವ ಗುರುತು ಪಡೆದ ಏಕೈಕ ದೇಶ ಭಾರತ.
ನಾಯಕತ್ವ ಶ್ರೇಯಾಂಕದಲ್ಲಿ 2025ರಲ್ಲಿ ಐದನೇ ಸ್ಥಾನದಲ್ಲಿದ್ದ ಮೋದಿ, ಈ ಬಾರಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. ಏಷ್ಯಾದಲ್ಲಿ ಭಾರತದ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಮುಂದುವರಿಸುವಲ್ಲಿ ಮೋದಿ ತೋರಿದ ಪರಿಣಾಮಕಾರಿತ್ವಕ್ಕೆ ಸಮೀಕ್ಷೆಯಲ್ಲಿ ಭಾಗವಹಿಸಿದ ತಜ್ಞರು ಹೆಚ್ಚಿನ ಮೌಲ್ಯ ನೀಡಿದ್ದಾರೆ.
2018ರಲ್ಲಿ ಸೂಚ್ಯಂಕ ಆರಂಭವಾದಾಗ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. 2023ರಲ್ಲಿಯೂ ಅದೇ ಸ್ಥಾನದಲ್ಲಿದ್ದ ಭಾರತ, 2024ರಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿತು. 2025ರಲ್ಲಿ 40 ಅಂಕಗಳ ಗಡಿ ದಾಟಿ ‘ಪ್ರಮುಖ ಶಕ್ತಿ’ ಸ್ಥಾನಮಾನವನ್ನು ಮರಳಿ ಪಡೆಯಿತು. ಈ ವರ್ಗದಲ್ಲಿರುವ ಏಕೈಕ ದೇಶ ಭಾರತ.
2026ರ ಸೂಚ್ಯಂಕವು 27 ದೇಶಗಳು ಮತ್ತು ಪ್ರದೇಶಗಳನ್ನು 131 ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಿದೆ. ಆರ್ಥಿಕ ಮತ್ತು ಸೇನಾ ಸಾಮರ್ಥ್ಯ, ರಾಜತಾಂತ್ರಿಕ ಪ್ರಭಾವ, ರಕ್ಷಣಾ ಪಾಲುದಾರಿಕೆ ಮತ್ತು ಸಾಂಸ್ಕೃತಿಕ ವ್ಯಾಪ್ತಿ ಇದರಲ್ಲಿ ಸೇರಿವೆ.
ವಿದೇಶಿ ಹೂಡಿಕೆಯ ಒಳಹರಿವಿನಲ್ಲಿ ಭಾರತ ಅಮೆರಿಕದ ನಂತರ ಎರಡನೇ ಸ್ಥಾನ ಪಡೆದಿದೆ. ಹೂಡಿಕೆ ಆಕರ್ಷಣೆಯಲ್ಲಿಯೂ ಭಾರತಕ್ಕೆ ಎರಡನೇ ಸ್ಥಾನ ಲಭಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶಗಳಿಗೆ ಹರಿದುಬಂದ ವಿದೇಶಿ ಬಂಡವಾಳವನ್ನು ಈ ಮೌಲ್ಯಮಾಪನ ಪರಿಗಣಿಸಿದೆ.
ಸಶಸ್ತ್ರ ಪಡೆಗಳ ಮಾನದಂಡದಲ್ಲಿ ಭಾರತ 100 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಚೀನಾ 85.3 ಅಂಕ ಹಾಗೂ ಅಮೆರಿಕ 64.8 ಅಂಕ ಗಳಿಸಿವೆ. ಸಕ್ರಿಯ ಸೇನಾ ಮತ್ತು ಅರೆಸೇನಾ ಪಡೆಗಳ ಗಾತ್ರ, ತರಬೇತಿ, ಸನ್ನದ್ಧತೆ ಮತ್ತು ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಈ ಮಾನದಂಡ ಪರಿಗಣಿಸುತ್ತದೆ.
ರಾಜತಾಂತ್ರಿಕ ವೇದಿಕೆಗಳ ಸದಸ್ಯತ್ವದಲ್ಲಿ ಭಾರತ ಎರಡು ಸ್ಥಾನ ಮೇಲೇರಿ ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ಜೊತೆ ಜಂಟಿ ಎರಡನೇ ಸ್ಥಾನ ಪಡೆದಿದೆ. ಸೂಚ್ಯಂಕ ಪರಿಗಣಿಸಿದ ಶೃಂಗಸಭೆಗಳು, ರಾಜತಾಂತ್ರಿಕ ವೇದಿಕೆಗಳು ಮತ್ತು ಪ್ರಾದೇಶಿಕ ಸಂಸ್ಥೆಗಳ ಪೈಕಿ ಭಾರತ 17ರಲ್ಲಿ ಭಾಗವಹಿಸಿದೆ. ಚೀನಾ 18ರಲ್ಲಿ ಭಾಗವಹಿಸಿದೆ.
ಆರ್ಥಿಕ ಒತ್ತಡವನ್ನು ಎದುರಿಸುವ ಸಾಮರ್ಥ್ಯದಲ್ಲಿ ಭಾರತ 68.3 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಚೀನಾ 75.3 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಅಮೆರಿಕ 73.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ದುಡಿಯುವ ವಯೋಮಾನದ ಜನಸಂಖ್ಯೆಯ ಗಾತ್ರ ಮತ್ತು ನಿರೀಕ್ಷಿತ ವೃದ್ಧಿಯನ್ನು ಪರಿಗಣಿಸುವ 2050ರವರೆಗಿನ ಮೌಲ್ಯಮಾಪನದಲ್ಲಿ ಭಾರತ 100 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದೆ. ಈ ಮಾನದಂಡದಲ್ಲಿ ಪೂರ್ಣ ಅಂಕ ಪಡೆದ ಏಕೈಕ ದೇಶ ಭಾರತ.